ನವದೆಹಲಿ: 18ನೇ ಲೋಕಸಭೆಯ ಸ್ಪೀಕರ್ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಓಂ ಬಿರ್ಲಾ ಅವರು ತುರ್ತು ಪರಿಸ್ಥಿತಿಯ ವಿರುದ್ಧದ ನಿರ್ಣಯವನ್ನು ಓದಿದ್ದು, ಕಾಂಗ್ರೆಸ್ ಸದಸ್ಯರನ್ನು ಕೆರಳಿಸಿತು.
ತಮ್ಮ ಆಸನಗಳಿಂದ ಎದ್ದುಸದನದ ಬಾವಿಗಿಳಿದ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿ, ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
'1975ರ ಜೂನ್ 26ರಂದು ಈ ದೇಶದ ಜನರು ತುರ್ತುಪರಿಸ್ಥಿತಿಯ ಕ್ರೂರ ವಾಸ್ತವತೆಗೆ ತೆರೆದುಕೊಂಡರು. ಪ್ರಧಾನಿಯಾಗಿದ್ದ ಇಂದಿರಾ ಗಾಂಧಿಯವರು ಹೇರಿದ್ದ ತುರ್ತುಪರಿಸ್ಥಿತಿ ಸಂವಿಧಾನದ ಮೇಲಿನ ದಾಳಿಯಾಗಿತ್ತು. ಅಂದಿನ ಕಾಂಗ್ರೆಸ್ ಸರ್ಕಾರ ವಿರೋಧ ಪಕ್ಷಗಳ ಸದಸ್ಯರನ್ನು ಜೈಲಿಗೆ ಹಾಕಿತ್ತು. ಮಾಧ್ಯಮಗಳ ಮೇಲೆ ಹಲವು ನಿರ್ಬಂಧಗಳನ್ನು ಹೇರಿತ್ತು ಮತ್ತು ನ್ಯಾಯಾಂಗದ ಸ್ವಾಯತ್ತತೆಯನ್ನೂ ಕಸಿದುಕೊಂಡಿತ್ತು' ಎಂದು ಓಂ ಬಿರ್ಲಾ ಅವರು ನಿರ್ಣಯವನ್ನು ಓದುತ್ತಾ ಹೇಳಿದರು.
'ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಚರ್ಚೆಯನ್ನು ಭಾರತ ಯಾವಾಗಲೂ ಬೆಂಬಲಿಸುತ್ತಾ ಬಂದಿದೆ... ಇಂತಹ ಭಾರತದ ಮೇಲೆ ಇಂದಿರಾಗಾಂಧಿ ಅವರು ಸರ್ವಾಧಿಕಾರವನ್ನು ಹೇರಿದರು. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಹೊಸಕಿಹಾಕಿದರು. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಿದರು' ಎಂದು ಹೇಳಿದರು.
'ತುರ್ತು ಪರಿಸ್ಥಿತಿ ಹೇರಿದ 50ನೇ ವರ್ಷಕ್ಕೆ ಕಾಲಿಡುತ್ತಿದ್ದೇವೆ. ಈ ಸಂದರ್ಭದಲ್ಲಿ 18ನೇ ಲೋಕಸಭೆಯು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರೂಪಿಸಿರುವ ಸಂವಿಧಾನವನ್ನು ರಕ್ಷಿಸವುದು, ಅದರ ಆಶಯಗಳನ್ನು ಎತ್ತಿ ಹಿಡಿಯುವ ಬದ್ಧತೆಯನ್ನು ಪುನರುಚ್ಚರಿಸುತ್ತದೆ' ಎಂದು ಹೇಳಿದರು.
'ಸದನವು ತುರ್ತುಪರಿಸ್ಥಿತಿ ಹೇರಿರುವುದನ್ನು ಬಲವಾಗಿ ಖಂಡಿಸುತ್ತದೆ. ತುರ್ತು ಪರಿಸ್ಥಿತಿಯನ್ನು ವಿರೋಧಿಸಿದವರು, ಭಾರತದ ಪ್ರಜಾಪ್ರಭುತ್ವವನ್ನು ರಕ್ಷಿಸುವ ಜವಾಬ್ದಾರಿಯನ್ನು ನಿರ್ವಹಿಸಿದವರ ದೃಢಸಂಕಲ್ಪವನ್ನು ನಾವು ಗೌರವಿಸುತ್ತೇವೆ' ಎಂದು ವಿರೋಧ ಪಕ್ಷಗಳ ಸದಸ್ಯರ ಪ್ರತಿಭಟನೆ, ಕೂಗಾಟದ ನಡುವೆಯೇ ಓಂ ಬಿರ್ಲಾ ಹೇಳಿದರು.
ಮೋದಿ ಸ್ವಾಗತ:
ಸ್ಪೀಕರ್ ಮಾಡಿದ ಪ್ರಸ್ತಾಪವನ್ನು ಸ್ವಾಗತಿಸಿದ ಪ್ರಧಾನಿ ನರೇಂದ್ರ ಮೋದಿ, 'ಸಂವಿಧಾನವನ್ನು ದ್ವಂಸ ಮಾಡಿದಾಗ, ಜನರ ಅಭಿಪ್ರಾಯಗಳನ್ನು ಹತ್ತಿಕ್ಕಿದಾಗ ಮತ್ತು ಸಂಸ್ಥೆಗಳನ್ನು ನಾಶ ಮಾಡಿದಾಗ ಏನಾಗುತ್ತದೆ ಎಂಬುದಕ್ಕೆ ತುರ್ತು ಪರಿಸ್ಥಿತಿಯ ಅವಧಿ ಉದಾಹರಣೆ. ಸರ್ವಾಧಿಕಾರ ಹೇಗಿರುತ್ತದೆ ಎಂಬುದನ್ನು ತುರ್ತುಪರಿಸ್ಥಿತಿ ಸಂದರ್ಭದಲ್ಲಿ ನಡೆದಿರುವ ಘಟನೆಗಳು ವಿವರಿಸುತ್ತವೆ' ಎಂದು ಹೇಳಿದರು.