ನವದೆಹಲಿ: ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರು 31 ಲಕ್ಷ ಕೋಟಿ ರೂಪಾಯಿ ನಷ್ಟ ಅನುಭವಿಸಲು ಕಾರಣವಾದ ಮಾಧ್ಯಮ ಸಂಸ್ಥೆಗಳು ಮತ್ತು ಅವರ ಕಂಪನಿಗಳ ವಿರುದ್ಧ ತನಿಖೆ ನಡೆಸುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ.
ಜೂನ್ 1 ರಂದು ಕೊನೆಯ ಹಂತದ ಚುನಾವಣೆ ಮುಗಿದ ನಂತರ ಮಾಧ್ಯಮ ಸಂಸ್ಥೆಗಳು ಪ್ರಸಾರ ಮಾಡಿದ ಎಕ್ಸಿಟ್ ಪೋಲ್‌ಗಳು ಮತ್ತು ಆ ಕುರಿತು ಚರ್ಚೆಯು ಜೂನ್ 3 ರವರೆಗೆ(ಸೋಮವಾರ) ಮಾರುಕಟ್ಟೆ ತೆರೆಯುವವರೆಗೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಂತೆ ಪ್ರೆರೇಪಿಸಿದವು. ಆದರೆ ಜೂನ್ 4 ರಂದು ಫಲಿತಾಂಶ ಪ್ರಕಟವಾದ ನಂತರ ಷೇರು ಮಾರುಕಟ್ಟೆ ಕುಸಿತಗೊಂಡಿದ್ದರಿಂದ 31 ಲಕ್ಷ ಕೋಟಿ ರೂಪಾಯಿ ನಷ್ಟ ಅನುಭವಿಸಿತು ಎಂದು ಅರ್ಜಿದಾರರು ಹೇಳಿದ್ದಾರೆ.
ಎಕ್ಸಿಟ್ ಪೋಲ್‌ಗಳ ನಂತರ ಷೇರು ಮಾರುಕಟ್ಟೆ ಎತ್ತರಕ್ಕೆ ಏರಿತು. ಆದರೆ
ಜೂನ್ 4 ರಂದು ನಿಜವಾದ ಫಲಿತಾಂಶ ಪ್ರಕಟವಾದ ನಂತರ ಅದು ಕುಸಿತಕ್ಕೆ ಕಾರಣವಾಯಿತು ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಷೇರು ಮಾರುಕಟ್ಟೆ ಕುಸಿತದ ಪರಿಣಾಮವಾಗಿ ಸಾಮಾನ್ಯ ಹೂಡಿಕೆದಾರರಿಗೆ 31 ಲಕ್ಷ ಕೋಟಿ ರೂಪಾಯಿಗಳ ಭಾರಿ ನಷ್ಟವಾಗಿದೆ ಎಂದು ತನಿಖೆ ಕೋರಿ ಅರ್ಜಿ ಸಲ್ಲಿಸಿದ ವಕೀಲ ಬಿಎಲ್ ಜೈನ್ ಹೇಳಿದ್ದಾರೆ.
"ಯಾವುದೇ ಸುದ್ದಿ ಸಂಸ್ಥೆ/ಚರ್ಚೆ/ಕಾರ್ಯಕ್ರಮದ ಪ್ರಸಾರವು ಯಾವುದೇ ರಾಜಕೀಯ ಪಕ್ಷದ ಪರವಾಗಿ ಅಥವಾ ವಿರುದ್ಧವಾಗಿ ಪಕ್ಷಪಾತ ಅಥವಾ ಪೂರ್ವಾಗ್ರಹ ಪೀಡಿತ ಅಭಿಪ್ರಾಯ ಪ್ರಕಟಿಸಬಾರದು. ದುರದೃಷ್ಟವಶಾತ್, ಅನಿಯಂತ್ರಿತ ಎಲೆಕ್ಟ್ರಾನಿಕ್ ಮಾಧ್ಯಮವು ವಾಣಿಜ್ಯ ಉದ್ಯಮವಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ಅದು ಒಂದು ರಾಜಕೀಯ ಪಕ್ಷದ ವಿರುದ್ಧ ಮತ್ತು ರಾಜಕೀಯ ಪಕ್ಷದ ಪರವಾಗಿ ಕೆಲಸ ಮಾಡುತ್ತಿವೆ'' ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.