ಕಾಸರಗೋಡು: ಶಾಲೆಗೆ ತೆರಳುವ ಬಾಲಕನೊಬ್ಬನ ಸೈಕಲ್ ಕಳವಾಗಿದ್ದು, ಈ ಬಗ್ಗೆ ಠಾಣೆಗೆ ದೂರು ನೀಡಿ ತನಿಖೆ ನಡೆಸಿದರೂ ಪತ್ತೆ ಸಾಧ್ಯವಾಗದಿದ್ದಾಗ ಸ್ವತ: ಪೊಲೀಸರೇ ಬಾಲಕಗೆ ಹೊಸ ಸೈಕಲ್ ಖರೀದಿಸಿ ಕೊಟ್ಟಿದ್ದಾರೆ.
ಹೊಸದುರ್ಗ ಠಾಣೆ ಪೊಲೀಸರು ಬಾಲಕಗೆ ಸೈಕಲ್ ಖರೀದಿಸಿ ನೀಡುವ ಮೂಲಕ ಬಾಲಕನ ಆಗ್ರಹ ಈಡೇರಿಸಿದ್ದಾರೆ. ಕಾಞಂಗಾಡು ಕಲ್ಲೂರಾವಿ ನಿವಾಸಿ ಶ್ರೀಜಾ ಎಂಬವರ ಪುತ್ರ, ಕಾಞಂಗಾಡು ಸೌತ್‍ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿ ಅಭಿಜಿತ್‍ನ ಸೈಕಲ್ ವಾರದ ಹಿಂದೆ ಮನೆ ಸನಿಹದಿಂದ ಕಳವಾಗಿತ್ತು. ಮತ್ತೊಂದು ಹೊಸ ಸೈಕಲ್ ಖರೀದಿ ಕುಟುಂಬಕ್ಕೆ ಕಷ್ಟಸಾಧ್ಯವಾದ ಹಿನ್ನೆಲೆಯಲ್ಲಿ ಈ ಬಗ್ಗೆ ತಾಯಿ ಮತ್ತು ಪುತ್ರ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಠಾಣಾಧಿಕಾರಿ ಎಂ.ಪಿ ಆಸಾದ್ ಅವರು ಸೈಕಲ್ ಪತ್ತೆಹಚ್ಚಿ ನೀಡುವುದಾಗಿ ಭರವಸೆ ನೀಡಿದ್ದರು. ವಾರದ ವರೆಗೆ ಅಭಿಜಿತ್ ಸೈಕಲ್ ಪತ್ತೆಗೆ ತಲಾಷ್ ನಡೆಸಿದ ಪೊಲೀಸರು, ಬಾಲಕನ ದುಗುಡ ಕಂಡು ಸ್ವತ: ಒಂದು ತೀರ್ಮಾನಕ್ಕೆ ಬಂದು ಹೊಸ ಸೈಕಲ್ ಖರೀದಿಸಿ ನೀಡಲು ಮುಂದಾಗಿದ್ದರು. ಠಾಣಾಧಿಕಾರಿ ಎಂ.ಪಿ ಆಸಾದ್ ನೇತೃತ್ವದಲ್ಲಿ ಪೊಲೀಸರು ಹಣ ಸಂಗ್ರಹಿಸಿ, ಬಾಲಕಗೆ ಹೊಸ ಸೈಕಲ್ ಖರೀದಿಸಿ ನೀಡಿದ್ದಾರೆ. ತಾಯಿ ಶ್ರೀಜಾ ಜತೆ ಠಾಣೆಗೆ ತೆರಳಿ ಅಭಿಜಿತ್ ಹೊಸ ಸೈಕಲ್ ಸ್ವೀಕರಿಸಿದ್ದಾನೆ. ಬಾಲಕನ ಸಂತೋಷದ ಕ್ಷಣಗಳಲ್ಲಿ ಪೊಲೀಸರೂ ಭಾಗಿಯಾಗಿ ಬೀಳ್ಕೊಟ್ಟಿದ್ದಾರೆ.