HEALTH TIPS

ಹಿರಿಯ ಸಾಹಿತಿ ಕಕ್ಕೆಪ್ಪಾಡಿ ಶಂಕರನಾರಾಯಣ ಭಟ್ ಇನ್ನಿಲ್ಲ

          ಬದಿಯಡ್ಕ : ಕಾಸರಗೋಡು ಜಿಲ್ಲೆಯ ಪ್ರಸಿದ್ಧ ಹಾಸ್ಯ ಸಾಹಿತಿ ಕೊಟ್ಯಾಡಿ ಸಮೀಪದ ಕಕ್ಕೆಪ್ಪಾಡಿ ಶಂಕರನಾರಾಯಣ ಭಟ್ಟ(82) ಅವರು ಶುಕ್ರವಾರ ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು. ಮೃತರು ಕೃಷಿಕರು, ಖ್ಯಾತ ಪಶು ನಾಟಿವೈದ್ಯರು, ಯಕ್ಷಗಾನ ಕಲಾವಿದರು, ಹಾಗೂ ಜನಾನುರಾಗಿ ಹಾಸ್ಯ ಸಾಹಿತಿಯಾಗಿದ್ದರು. ಅಶು ಚುಟುಕು ರಚನೆ ಅವರ ಹವ್ಯಾಸವಾಗಿತ್ತು. ಸ್ಥಳದಲ್ಲೇ ಚುಟುಕು, ಹನಿಗವನ ಮೊದಲಾದ ಸಾಹಿತ್ಯ ಪ್ರಕಾರವನ್ನು ನಿಮಿಷಾರ್ಧದಲ್ಲಿ ರಚಿಸಿ, ಓದುಗರನ್ನು ಚಕಿತಗೊಳಿಸುತ್ತಿದ್ದರು. ಹಾಸ್ಯ ಸೃಷ್ಟಿಯ ಶಾರೀರ ಹಾಗೂ ಶರೀರ, ನಗು ಹೊಮ್ಮಿಸುವ ಅವರ ಅಭಿನಯ, ವಿಷಯದ ಮಂಡನೆ, ಮುಖಮುದ್ರೆಗಳು ಮಕ್ಕಳನ್ನು ಸುಲಭವಾಗಿ ಆಕರ್ಷಿಸುತ್ತವೆ. ಆದ್ದರಿಂದಲೇ ಅವರು ಸಾಹಿತ್ಯದ ಪಾಠಕ್ಕೆ ಶಾಲಾ ಮಕ್ಕಳನ್ನೇ ಆಯ್ದುಕೊಳ್ಳುತ್ತಿದ್ದರು. 

           ಅನೇಕ ವರ್ಷಗಳಿಂದ ನೇಪಥ್ಯದಲ್ಲೇ ಹುದುಗಿದ್ದ ಅವರ ಚುಟುಕು ರಚನೆ, ಹಾಸ್ಯ ಪ್ರಜ್ಞೆ ಹೊರಬಂದದ್ದು ಕಾಸರಗೋಡಿನ ಎಡನೀರು ಸ್ವಾಮೀಜೀಸ್ ಶಾಲೆಯಲ್ಲಿ. ಕಾಸರಗೋಡು ತಾಲ್ಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ 28-11-2009ರಂದು ನಡೆದ ಚುಟುಕು ಸಾಹಿತ್ಯ ಅಭಿಯಾನಕ್ಕೆ ವೀಕ್ಷಕರಾಗಿ ಬಂದಿದ್ದ ಕಕ್ಕೆಪ್ಪಾಡಿಯವರು, ಸ್ಥಳದಲ್ಲೇ ಸಕಾಲಿಕ ಚುಟುಕು ರಚಿಸಿ ಮಕ್ಕಳಿಗೆ ಆಸಕ್ತಿ ಹುಟ್ಟಿಸಿದ್ದÀರು. ನಂತರ ನಡೆದ ಬಹುತೇಕ ಎಲ್ಲಾ ಅಭಿಯಾನಗಳಲ್ಲೂ ಕೂಡಾ ಅವರು ಹಾಜರಾಗುತ್ತಿದ್ದರು. ತಮ್ಮ ನವೀನ ಹಾಸ್ಯದ ತುಣುಕುಗಳನ್ನು ಮಂಡಿಸಿ, ಮಕ್ಕಳಲ್ಲಿ ಸಾಹಿತ್ಯ ಪ್ರಜ್ಞೆಯನ್ನು ಅರಳಿಸುತ್ತಿದ್ದರು. 

          ಯಾವುದೇ ಫಲಾಪೇಕ್ಷೆ ಇಲ್ಲದೆ ಶಾಲೆಗಳಿಗೆ ತೆರಳುವ ಶಂಕರನಾರಾಯಣ ಭಟ್ಟರು, ಆ ಶಾಲೆಯ ಮಕ್ಕಳಿಗೆ ಸಾಹಿತ್ಯ ರಚನೆಯ ಬಗ್ಗೆ ಮಾಹಿತಿ ನೀಡುತ್ತಿದ್ದರು. ಅನೇಕ ಮಕ್ಕಳಿಗೆ 'ಅಜ್ಜ'ನಾಗಿ ಅಕ್ಕರೆಯಾಗಿದ್ದರು. ಮಕ್ಕಳಿಗೆ ಕೆಲವೊಂದು ಸ್ಪರ್ಧೆಗಳನ್ನು ನಡೆಸಿ, ತಮಗೆ ಗೌರವ ರೂಪದಲ್ಲಿ ದೊರೆತ ಪುಸ್ತಕಗಳನ್ನು ಮಕ್ಕಳಿಗೆ ಬಹುಮಾನವಾಗಿ ವಿತರಿಸುತ್ತಿದ್ದರು. ಶಾಲೆಯಿಂದ ಒತ್ತಾಯವಾಗಿ ಹಣ ನೀಡಿದರೆ, ಅದರಿಂದ ಉದಯೋನ್ಮುಖ ಸಾಹಿತಿಗಳ ಕೃತಿಗಳನ್ನು ಖರೀದಿಸಿ, ಮಕ್ಕಳಿಗೆ ಬಹುಮಾನ ರೂಪದಲ್ಲಿ ನೀಡುತ್ತಿದ್ದರು. ಸಾಹಿತ್ಯದಿಂದ ದೊರೆತ ಮೊತ್ತವನ್ನು ಸಾಹಿತ್ಯಕ್ಕೆ ಬಳಸುತ್ತಿದ್ದರು. 

          ಅವರ ವಿದ್ಯಾರ್ಥಿ ಜೀವನದಲ್ಲಿ ನಡೆಯುತ್ತಿದ್ದ ನಾಟಕಗಳಲ್ಲಿ ತೆನ್ನಾಲಿ, ಮಿರ್‍ಸಾದಿಕ್ ಪಾತ್ರಗಳಲ್ಲಿ ಅಭಿನಯಿಸಿದ್ದರು. ಸುಮಾರು 60 ವರ್ಷಗಳಿಂದ ಜಾನುವಾರುಗಳ ನಾಟಿ ವೈದ್ಯರೂ ಆಗಿದ್ದರು. ಕಕ್ಕೆಪ್ಪಾಡಿಯವರಿಗೆ ಸಿರಿಬಾಗಿಲು ವೆಂಕಪ್ಪಯ್ಯ ಸ್ಮಾರಕ ಪ್ರಶಸ್ತಿ, ಸುಳ್ಯದ ಚಂದನ ಸಾಹಿತ್ಯ ಪ್ರಶಸ್ತಿ, ದಕ್ಷಿಣಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನಿಂದ ಸನ್ಮಾನ, ಮೂಡುಬಿದಿರೆಯ ಆಳ್ವಾಸ್ ನುಡಿಸಿರಿಯಲ್ಲಿ ನಡೆದ ನಾಟಿವೈದ್ಯ ಸಮ್ಮೇಳನದಲ್ಲಿ ಸನ್ಮಾನ ಸೇರಿದಂತೆ ಅನೇಕ ಕಡೆಗಳಲ್ಲಿ ಸನ್ಮಾನಿತರಾಗಿದ್ದಾರೆ. ಇವರ ರಚನೆಗಳು ಚುಟುಕು ರಸಾಯನ, ಹಳಬರ ಜೋಳಿಗೆ, ಹೂಬಾಣ, ನೇಸರ ಮೊದಲಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಮೃತರಿಗೆ ಪುತ್ರರಾದ ಸೂರ್ಯನಾರಾಯಣ, ಕೃಷ್ಣಮೂರ್ತಿ, ಕೃಷ್ಣಪ್ರಸಾದ್ ಹಾಗೂ ಅಪಾರ ಅಭಿಮಾನಿಗಳನ್ನೂ, ಬಂಧುಗಳನ್ನು ಅಗಲಿದ್ದಾರೆ.  




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries