ಗುವಾಹಟಿ: ಅಸ್ಸಾಂ ಗೃಹ ಕಾರ್ಯದರ್ಶಿ ಶಿಲಾದಿತ್ಯ ಚೇಟಿಯಾ ಅವರು ಮಂಗಳವಾರ ಖಾಸಗಿ ಆಸ್ಪತ್ರೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರ ಪತ್ನಿ ನಿಧನರಾದ ಕೆಲವೇ ಕ್ಷಣಗಳಲ್ಲಿ ಅವರು ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
2009ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಚೇಟಿಯಾ ಅವರು ತನ್ನ ಸರ್ವೀಸ್ ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಇವರು ರಾಜ್ಯದ ಗೃಹ ಕಾರ್ಯದರ್ಶಿಯಾಗಿ ನೇಮಕಗೊಳ್ಳುವ ಮೊದಲು ಟಿನ್ಸುಕಿಯಾ ಮತ್ತು ಸೋನಿತ್‌ಪುರ ಜಿಲ್ಲೆಗಳ ಎಸ್‌ಪಿಯಾಗಿ ಸೇವೆ ಸಲ್ಲಿಸಿದ್ದರು.
'ಐಸಿಯುನಲ್ಲಿದ್ದ ಪತ್ನಿಯ ಸಾವಿನ ಸುದ್ದಿ ಕೇಳಿದ ಚೇಟಿಯಾ ಅವರು ಕೆಲವೇ ನಿಮಿಷಗಳಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರ ಪತ್ನಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಅಧಿಕಾರಿಯ ದುರಂತ ಸಾವಿನಿಂದ ಇಡೀ ಅಸ್ಸಾಂ ಪೊಲೀಸ್ ಕುಟುಂಬ ತೀವ್ರ ದುಃಖದಲ್ಲಿದೆ' ಎಂದು ಡಿಜಿಪಿ ಜಿ.ಪಿ ಸಿಂಗ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಫೋರೆನ್ಸಿಕ್ ಮತ್ತು ಸಿಐಡಿ ಅಧಿಕಾರಿಗಳ ತಂಡ ಆಸ್ಪತ್ರೆಗೆ ಭೇಟಿ ನೀಡಿವೆ ಎಂದು ಅವರು ತಿಳಿಸಿದ್ದಾರೆ.
ಚೇಟಿಯಾ ಅವರ ತಂದೆ ಕೂಡ ಪೊಲೀಸ್ ಅಧಿಕಾರಿಯಾಗಿದ್ದರು. ಮೃತರು ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ. ಈ ದಂಪತಿಗೆ ಮಕ್ಕಳಿರಲಿಲ್ಲ. ಕಳೆದ ಕೆಲ ತಿಂಗಳ ಹಿಂದೆ ಚೇಟಿಯಾ ಅವರು ತಮ್ಮ ತಾಯಿ ಮತ್ತು ಅತ್ತೆಯನ್ನೂ ಕಳೆದುಕೊಂಡಿದ್ದರು ಎಂದು ಮೂಲಗಳು ತಿಳಿಸಿವೆ.