ತಿರುವನಂತಪುರಂ: 20 ಲೋಕಸಭಾ ಸ್ಥಾನಗಳನ್ನು ಹೊಂದಿರುವ ಕೇರಳದಲ್ಲಿ ಈ ಮೊದಲು ಬಿಜೆಪಿ ಒಮ್ಮೆಯೂ ಲೋಕಸಭಾ ಸ್ಥಾನವನ್ನು ಗೆದ್ದಿರಲಿಲ್ಲ. ಆದರೆ ತ್ರಿಶೂರ್‌ನಿಂದ ಭಾರತೀಯ ಜನತಾ ಪಕ್ಷ (ಬಿಜೆಪಿ)ದಿಂದ ಸ್ಪರ್ಧಿಸಿ ವಿಜೇತರಾದ ಮಲಯಾಳಂನ ಜನಪ್ರಿಯ ನಟ ಮತ್ತು ರಾಜಕಾರಣಿ ಸುರೇಶ್ ಗೋಪಿ ಅವರು ದಕ್ಷಿಣ ರಾಜ್ಯದಲ್ಲಿ ಪಕ್ಷದ ಲೋಕಸಭೆ ಖಾತೆಯನ್ನು ತೆರೆಯಲು ನೆರವಾಗಿದ್ದಾರೆ.
ಇಷ್ಟಕ್ಕೂ ಕಮ್ಯೂನಿಸ್ಟರು ಪ್ರಬಲವಾಗಿರುವ ಈ ದೇವರನಾಡಿನಲ್ಲಿ ಸುರೇಶ್ ಗೋಪಿ ಗೆದ್ದು ಬಂದಿರುವುದು ಪವಾಡವಲ್ಲ. ಬದಲಾಗಿ ಅವರು ಮತ್ತು ಬಿಜೆಪಿ ಆ ರಾಜ್ಯದಲ್ಲಿ ಖಾತೆ ತೆರೆಯಬೇಕೆಂದು ಪಟ್ಟ ಪಡಿಪಾಟಲು ಅಷ್ಟಿಷ್ಟಲ್ಲ. ಅವರ ಗೆಲುವಿನ ಹಿಂದೆ ರಣರೋಚಕ ಕಥೆಯೇ ಇದೆ.
ಗೋಪಿ ಅಕ್ಟೋಬರ್ 2016 ರಲ್ಲಿ ಅಧಿಕೃತವಾಗಿ ಬಿಜೆಪಿ ಸೇರಿದರು. 2019 ರಲ್ಲಿ ಅವರು 2019 ರ ಸಾರ್ವತ್ರಿಕ ಚುನಾವಣೆಯಲ್ಲಿ ತ್ರಿಶೂರ್‌ನಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ಆದರೆ ಅವರು ಕಾಂಗ್ರೆಸ್‌ನ ಪ್ರತಾನಪನ್ ವಿರುದ್ಧ ಸೋತರು.
ಆದರೆ ಛಲ ಬಿಡದ ತ್ರಿವಿಕ್ರಮನಂತೆ ಮತ್ತೆ ಅದೇ ತ್ರಿಶೂರ್‌ನಿಂದ ಬಿಜೆಪಿ ಅಭ್ಯರ್ಥಿಯಾಗಿ ಮತ್ತೆ ಕಣಕ್ಕಿಳಿದ ಸುರೇಶ್ ಗೋಪಿ ಪಕ್ಷದ ಖಾತೆಯನ್ನು ತೆರೆಯಲು ನೆರವಾಗಿದ್ದಾರೆ. ಈ ಬಾರಿ ಗೋಪಿ 74,686 ಮತಗಳ ಅಂತರದಿಂದ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ)ನ ವಿಎಸ್ ಸುನೀಲ್‌ಕುಮಾರ್ ವಿರುದ್ಧ ಗೆಲುವು ಸಾಧಿಸಿದ್ದಾರೆ. ಗೋಪಿ ಒಟ್ಟು 4,12,338 ಮತಗಳನ್ನು ಪಡೆದಿದ್ದಾರೆ.
20 ಲೋಕಸಭಾ ಸ್ಥಾನಗಳನ್ನು ಹೊಂದಿರುವ ಕೇರಳದಲ್ಲಿ ಬಿಜೆಪಿ ಒಮ್ಮೆಯೂ ಲೋಕಸಭಾ ಸ್ಥಾನವನ್ನು ಗೆದ್ದಿಲ್ಲ. ದಕ್ಷಿಣ ರಾಜ್ಯವು ಕಮ್ಯುನಿಸ್ಟ್ ಪಕ್ಷಗಳ ಭದ್ರಕೋಟೆಯಾಗಿದೆ. 2019 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಟಿಎನ್ ಪ್ರತಾನಪನ್ ಅವರು ತ್ರಿಶೂರ್ ಸ್ಥಾನವನ್ನು ಗೆದ್ದಿದ್ದರು.
ಮತ ಎಣಿಕೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಭಾರತದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್, ಸುರೇಶ್ ಗೋಪಿ ಅವರು ತ್ರಿಶೂರ್ ಮತ್ತು ಕೇರಳದಲ್ಲಿ ಶ್ರಮಿಸಿದ್ದಾರೆ. 'ಕೇರಳ ಮತ್ತು ದಕ್ಷಿಣದಲ್ಲಿ ಬಿಜೆಪಿಯ ವಿಸ್ತರಣೆಯಿಂದ ನಾವು ಸಂತೋಷ ಮತ್ತು ಉತ್ಸುಕರಾಗಿದ್ದೇವೆ. ತ್ರಿಶೂರ್ ಮತ್ತು ಕೇರಳದಲ್ಲಿ ಗೋಪಿ ತುಂಬಾ ಕಷ್ಟಪಟ್ಟಿದ್ದಾರೆ' ಎಂದು ಹೇಳಿದರು.