ಕಾಸರಗೋಡು: ಅಂತಾರಾಷ್ಟ್ರೀಯ ಒಲಂಪಿಕ್ ದಿನದ ಅಂಗವಾಗಿ ಕಾಞಂಗಾಡ್ ಹಳೇ ಬಸ್ ನಿಲ್ದಾಣದ ಬಳಿ ಸಾಮೂಹಿಕ ಓಟ ಶನಿವಾರ ನಡೆಯಿತು. ಕಾಞಂಗಾಡ್ ಹಳೆ ಬಸ್ ನಿಲ್ದಾಣ ಪ್ರದೇಶದಿಂದ ಆರಂಭಗೊಂಡ ಓಟ ಕಾಞಂಗಾಡ್ ಹೊಸ ಬಸ್ ನಿಲ್ದಾಣ ಪ್ರದೇಶದಲ್ಲಿ ಸಂಪನ್ನಗೊಂಡಿತು. ಜಿಲ್ಲಾ ಒಲಂಪಿಕ್ ಅಸೋಸಿಯೇಷನ್ ವತಿಯಿಂದ ಸಾಮೂಹಿಕ ಓಟ ಆಯೋಜಿಸಲಾಗಿತ್ತು.
ಅಂತಾರಾಷ್ಟ್ರೀಯ ಕ್ರೀಡಾ ತಾರೆಗಳಾದ ಕೆ.ಎಸ್.ಎಸ್.ಮ್ಯಾಥ್ಯೂ, ಅಂಜು ಬಾಲಕೃಷ್ಣನ್, ಜಗದೀಶ್ ಕುಂಬಳೆ, ಮನೋಜ್ ಅಚ್ಚಂತುರುತ್ತಿ, ಅನ್ವಿದಾ ಅನಿಲ್, ಆರ್ಯಶ್ರೀ ಮತ್ತು ಮಾಳವಿಕಾ ಸಾಮೂಹಿಕ ಓಟಕ್ಕೆ ಹಸಿರುನಿಶಾನಿ ತೋರುವ ಮೂಲಕ ಚಾಲನೆ ನೀಡಿದರು. ರಾಜ್ಯ ಮತ್ತು ಜಿಲ್ಲಾ ಕ್ರೀಡಾ ಪ್ರತಿಭೆಗಳು ಸೇರಿದಂತೆ ಸಾವಿರಕ್ಕೂ ಹೆಚ್ಚು ಕ್ರೀಡಾ ಪಟುಗಳು ಸಾಮೂಹಿಕ ಓಟದಲ್ಲಿ ಭಾಗವಹಿಸಿದ್ದರು.
ಕಾಞಂಗಾಡ್ ಹೊಸ ಬಸ್ ನಿಲ್ದಾಣ ವಠಾರದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಒಲಿಂಪಿಯನ್ ಕೆ.ಎಸ್ ಮ್ಯಾಥ್ಯೂ ಒಲಿಂಪಿಕ್ ದಿನದ ಪ್ರತಿಜ್ಞಾವಿಧಿ ಬೋಧಿಸಿದರು. ಶಾಸಕ ಇ.ಚಂದ್ರಶೇಖರನ್ ಒಲಿಂಪಿಕ್ ದಿನಾಚರಣೆಯನ್ನು ಉದ್ಘಾಟಿಸಿದರು. ಜಿಲ್ಲಾ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷ ಟಿ.ವಿ.ಬಾಲನ್ ಅಧ್ಯಕ್ಷತೆ ವಹಿಸಿದ್ದರು. ಅಂಜು ಬಾಲಕೃಷ್ಣನ್ ಮತ್ತು ನಗರಸಭೆ ಉಪಾಧ್ಯಕ್ಷ ಬಿಲ್ಟೆಕ್ ಅಬ್ದುಲ್ಲಾ ಉಪಸ್ಥಿತರಿದ್ದರು. ಜಿಲ್ಲಾ ಒಲಿಂಪಿಕ್ ಸಂಸ್ಥೆಯ ಕಾರ್ಯದರ್ಶಿ ಎಂ.ಅಚ್ಯುತನ್ ಸ್ವಾಗತಿಸಿದರು. ಡಾ. ಎಂ.ಕೆ.ರಾಜಶೇಖರನ್ ವಂದಿಸಿದರು.
2024ರ ಜುಲೈ 26 ರಿಂದ ಆಗಸ್ಟ್ 11ರವರೆಗೆ ಫ್ರಾನ್ಸ್‍ನ ಪ್ಯಾರಿಸ್‍ನಲ್ಲಿ ನಡೆಯಲಿರುವ 33 ನೇ ಒಲಿಂಪಿಕ್ ಕ್ರೀಡಾಕೂಟದ ಪೂರ್ವಭಾವಿಯಾಗಿ ಒಲಿಂಪಿಕ್ ಸಾಮೂಹಿಕ ಓಟ ಆಯೋಜಿಸಲಾಗಿತ್ತು.