ಕೋಲ್ಕತ್ತ: ಲೋಕಸಭಾ ಚುನಾವಣೆಯ ಮತದಾನದ ಬಳಿಕ ನಡೆದ ಹಿಂಸಾಚಾರದ ಸಂತ್ರಸ್ತರು ರಾಜಭವನ ಪ್ರವೇಶಿಸುವುದನ್ನು ಪೊಲೀಸರು ಯಾವ ಕಾರಣಕ್ಕೆ ತಡೆದಿದ್ದಾರೆ ಎಂಬುದನ್ನು ತಿಳಿಸುವಂತೆ ಸೂಚಿಸಿ, ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ.ಆನಂದ್ ಬೋಸ್ ಅವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಪತ್ರ ಬರೆದಿದ್ದಾರೆ.

ಇಲ್ಲಿನ ಬುರಾಬಜಾರ್‌ನ ಮಾಹೇಶ್ವರಿ ಭವನದಲ್ಲಿರುವ ಸಂತ್ರಸ್ತರನ್ನು ರಾಜ್ಯಪಾಲರು ಶುಕ್ರವಾರ ಭೇಟಿಯಾದರು. ಮತದಾನದ ಬಳಿಕ ನಡೆದ ಹಿಂಸಾಚಾರಕ್ಕೆ ಟಿಎಂಸಿಯೇ ಕಾರಣ ಎಂದು ಬಿಜೆಪಿ ಆರೋಪಿಸಿತ್ತು. ಆಡಳಿತಾರೂಢ ಪಕ್ಷವು ಈ ಆರೋಪವನ್ನು ತಳ್ಳಿಹಾಕಿತ್ತು.
'ಬಿಜೆಪಿ ನಾಯಕ ಸುವೇಂದು ಅಧಿಕಾರಿ ಮತ್ತು ಸಂತ್ರಸ್ತರನ್ನು ಒಳಗೊಂಡ ನಿಯೋಗದ ರಾಜಭವನ ಭೇಟಿಗೆ ರಾಜ್ಯಪಾಲರು ಲಿಖಿತವಾಗಿ ಒಪ್ಪಿಗೆ ನೀಡಿದ್ದರು. ಆದರೂ ಅವರ ಭೇಟಿಗೆ ಪೊಲೀಸರು ಅವಕಾಶ ನೀಡಲಿಲ್ಲ. ಅವರನ್ನು ತಡೆಯಲು ಏನು ಕಾರಣ ಎಂಬುದನ್ನು ತಿಳಿಸುವಂತೆ ರಾಜ್ಯಪಾಲರು ಪತ್ರದ ಮೂಲಕ ಮುಖ್ಯಮಂತ್ರಿಗೆ ನಿರ್ದೇಶನ ನೀಡಿದ್ದಾರೆ' ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಬೋಸ್ ಅವರು ಮಾಹೇಶ್ವರಿ ಭವನದಲ್ಲಿ ಆಶ್ರಯ ಪಡೆದಿರುವ 150ಕ್ಕೂ ಅಧಿಕ ಮಂದಿಯ ಜತೆ ಮಾತುಕತೆ ನಡೆಸಿ, ಅವರ ದೂರುಗಳನ್ನು ಆಲಿಸಿದ್ದಾರೆ ಎಂದು ಹೇಳಿದರು.
ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಮತ್ತು ಸಂತ್ರಸ್ತರು ಗುರುವಾರ ರಾಜ್ಯಪಾಲರ ಭೇಟಿಗೆ ರಾಜಭವನಕ್ಕೆ ಬಂದಾಗ ಪೊಲೀಸರು ತಡೆದಿದ್ದರು. ರಾಜಭವನದ ಸುತ್ತಲೂ ಸೆಕ್ಷನ್ 144 ಜಾರಿಯಲ್ಲಿದೆ ಎಂಬ ಕಾರಣ ಹೇಳಿ ಅವರನ್ನು ವಾಪಸ್ ಕಳುಹಿಸಿದ್ದರು.