ನವದೆಹಲಿ: ಜಮ್ಮು ವಿಭಾಗದಲ್ಲಿ ಪ್ರದೇಶಗಳ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸುವ ಹಾಗೂ ಭಯೋತ್ಪಾದನೆಯ ವಿಚಾರದಲ್ಲಿ ಶೂನ್ಯ ಸಹನೆಯ ಯೋಜನೆಗಳನ್ನು ಜಾರಿಗೆ ತರುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭದ್ರತಾ ಪಡೆಗಳಿಗೆ ಸೂಚನೆ ನೀಡಿದ್ದಾರೆ.
ನವದೆಹಲಿ: ಜಮ್ಮು ವಿಭಾಗದಲ್ಲಿ ಪ್ರದೇಶಗಳ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸುವ ಹಾಗೂ ಭಯೋತ್ಪಾದನೆಯ ವಿಚಾರದಲ್ಲಿ ಶೂನ್ಯ ಸಹನೆಯ ಯೋಜನೆಗಳನ್ನು ಜಾರಿಗೆ ತರುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭದ್ರತಾ ಪಡೆಗಳಿಗೆ ಸೂಚನೆ ನೀಡಿದ್ದಾರೆ.
ಈ ಯೋಜನೆಗಳನ್ನು ಕಾಶ್ಮೀರ ವಿಭಾಗದಲ್ಲಿ ಜಾರಿಗೆ ತಂದು ಯಶಸ್ಸು ಕಾಣಲಾಗಿದೆ, ಅವುಗಳನ್ನು ಜಮ್ಮು ವಿಭಾಗದಲ್ಲಿಯೂ ಜಾರಿಗೆ ತರಬೇಕು ಎಂದು ಅವರು ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಭದ್ರತಾ ಪರಿಸ್ಥಿತಿಯನ್ನು ಅವಲೋಕಿಸಲು ಕರೆದಿದ್ದ ಉನ್ನತ ಮಟ್ಟದ ಸಭೆಯಲ್ಲಿ ಅವರು ಈ ಸೂಚನೆಯನ್ನು ಅಧಿಕಾರಿಗಳಿಗೆ ರವಾನಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ವಾರ್ಷಿಕ ಅಮರನಾಥ ಯಾತ್ರೆಗೆ ನಡೆದಿರುವ ಸಿದ್ಧತೆಗಳನ್ನು ಶಾ ಅವರು ಇನ್ನೊಂದು ಸಭೆಯಲ್ಲಿ ಪರಿಶೀಲಿಸಿದರು. ಯಾತ್ರೆಯು ಜೂನ್ 29ರಿಂದ ಆರಂಭವಾಗಲಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿನ ಪರಿಸ್ಥಿತಿಯ ಬಗ್ಗೆ ಶಾ ಅವರಿಗೆ ವಿಸ್ತೃತ ವಿವರಣೆ ನೀಡಲಾಯಿತು ಎಂದು ಮೂಲಗಳು ಹೇಳಿವೆ. ಇಲ್ಲಿ ಭಯೋತ್ಪಾದಕರನ್ನು ಗುರಿಯಾಗಿಸಿಕೊಂಡ ಕಾರ್ಯಾಚರಣೆಗಳು ಮುಂದಿನ ದಿನಗಳಲ್ಲಿ ಇನ್ನಷ್ಟು ತೀವ್ರಗೊಳ್ಳಲಿವೆ.
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್, ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಸೇನೆಯ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಸೇರಿದಂತೆ ಹಲವು ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು.