ನವದೆಹಲಿ: ಜೂನ್ 24ರಿಂದ ಜುಲೈ 3 ರವರೆಗೆ ನಡೆಯಲಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಜೂ.26 ರಂದು 18 ನೇ ಲೋಕಸಭೆಯ ಸ್ಪೀಕರ್ ಚುನಾವಣೆ ನಡೆಯಬಹುದು ಎಂದು ನಿರೀಕ್ಷಿಸಲಾಗಿದೆ. ಆದರೆ, ಬಿಜೆಪಿ ಬಹುಮತಕ್ಕೆ 32 ಸ್ಥಾನ ಕಡಿಮೆ ಇರುವುದರಿಂದ ಎನ್‌ಡಿಎ ಮಿತ್ರಪಕ್ಷಗಳಿಗೆ ಈ ಪ್ರಮುಖ ಸ್ಥಾನ ಒಲಿಯಲಿದೆಯೇ ಎಂಬ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ.
ಇನ್ನೂ ಅನಿಶ್ಚಿತತೆ ಇದೆಯಾದರೂ ಬಹುಮತದ ಕಾರಣದಿಂದ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿ ಸಪೀಕರ್ ಆಗುವುದು ಖಚಿತ ಎನ್ನಲಾಗುತ್ತಿದೆ.
ಜನತಾ ದಳ (ಯುನೈಟೆಡ್) ಮತ್ತು ತೆಲುಗು ದೇಶಂ ಪಾರ್ಟಿ ( ಟಿಡಿಪಿ ) ಸೇರಿದಂತೆ ಎನ್‌ಡಿಎ ಮಿತ್ರಪಕ್ಷಗಳಿಗೆ ಸ್ಥಾನ ನೀಡಬೇಕೆಂದು ಆಪ್ ಮತ್ತು ಇಂಡಿಯಾ ಬ್ಲಾಕ್ ಒತ್ತಾಯಿಸಿದೆ. ಇದು ಬಿಜೆಪಿ ನೇತೃತ್ವದ ಒಕ್ಕೂಟದೊಳಗೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ.
2024 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 240 ಸ್ಥಾನಗಳನ್ನು ಪಡೆದುಕೊಂಡಿತು. ಬಹುಮತಕ್ಕೆ 32 ಸ್ಥಾನಗಳ ಕೊರತೆಯಿದೆ. ಆದಾಗ್ಯೂ, ಟಿಡಿಪಿ 16 ಸ್ಥಾನ ಮತ್ತು ಜೆಡಿಯು 12 ಸ್ಥಾನಗಳನ್ನು ಗಳಿಸುವುದರೊಂದಿಗೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರವನ್ನು ರಚಿಸುವಲ್ಲಿ ನಿರ್ಣಾಯಕವಾದವು. ಇವೆರಡು ಪಕ್ಷಗಳಿಗೆ ಕಿಂಗ್ ಮೇಕರ್ ಎಂಬ ಹೆಗ್ಗಳಿಕೆ ತಂದುಕೊಟ್ಟಿದೆ.
ಲೋಕಸಭಾ ಸ್ಪೀಕರ್ ಹುದ್ದೆಯ ಮೇಲೆ ಇಲ್ಲಿತನಕ ಅನಿಶ್ಚಿತತೆ ಆವರಿಸಿದೆ. ಆದಾಗ್ಯೂ, ಬಿಜೆಪಿಯ ಸ್ಪೀಕರ್ ಆಯ್ಕೆಗೆ ಜೆಡಿಯು ಬೆಂಬಲ ವ್ಯಕ್ತಪಡಿಸಿದೆ. ಆದರೆ ಟಿಡಿಪಿ ಎನ್‌ಡಿಎ ಮೈತ್ರಿಕೂಟದ ಪಾಲುದಾರರಲ್ಲಿ ಒಮ್ಮತದ ಅಭ್ಯರ್ಥಿಯನ್ನು ಪ್ರತಿಪಾದಿಸಿದೆ.
ಟಿಡಿಪಿ ವಕ್ತಾರ ಪಟ್ಟಾಭಿ ರಾಮ್ ಕೊಮ್ಮರೆಡ್ಡಿ ಮಾತನಾಡಿ, ಒಮ್ಮತಕ್ಕೆ ಬಂದ ನಂತರ ನಾವು ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇವೆ. ಎಲ್ಲಾ ಪಾಲುದಾರರು ಅಭ್ಯರ್ಥಿಯನ್ನು ಬೆಂಬಲಿಸುತ್ತೇವೆ. ಪ್ರಸ್ತುತ, ಬಿಜೆಪಿಯ ಆಂಧ್ರ ಅಧ್ಯಕ್ಷೆ ಪುರಂದೇಶ್ವರಿ ಮತ್ತು ಟಿಡಿಪಿ ಸಂಸದ ಜಿ.ಎಂ.ಹರೀಶ್ ಬಾಲಯೋಗಿ ಪ್ರಮುಖ ಸ್ಪರ್ಧಿಗಳು. ಈ ಹಿಂದಿನ ಸ್ಪೀಕರ್ ಓಂ ಬಿರ್ಲಾ ಕೂಡ ಪೈಪೋಟಿಯಲ್ಲಿದ್ದಾರೆ.
ಟಿಡಿಪಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ವಿರೋಧ ಪಕ್ಷ ಇಂಡಿಯಾ ಬಣ ಬೆಂಬಲ ನೀಡಲಿದೆ ಎಂದು ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವುತ್ ಘೋಷಿಸಿದ್ದಾರೆ. ಸಂಪ್ರದಾಯದಂತೆ ಉಪಸಭಾಪತಿ ಸ್ಥಾನವನ್ನು ಪ್ರತಿಪಕ್ಷಗಳಿಗೆ ನೀಡಬೇಕು. ಇಲ್ಲವಾದರೆ ಇಂಡಿಯಾ ಬ್ಲಾಕ್ ಸ್ಪೀಕರ್ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ ಎಂದು ಅವರು ಹೇಳಿದ್ದಾರೆ.