ಮಂಜೇಶ್ವರ : ರಾಷ್ಟ್ರೀಯ ಹೆದ್ದಾರಿ ವಶದಲ್ಲಿರುವ ಸೌಲಭ್ಯಗಳಿಂದ ಕೂಡಿದ ತೂಮಿನಾಡು ಜಂಕ್ಷನಿನಲ್ಲಿ ಸಾರ್ವಜನಿಕರ ಸಮ್ಮುಖದಲ್ಲಿ ಸ್ಥಳ ಗುರುತಿಸುವಿಕೆ ನಡೆದು ಮಂಜೂರಾದ ಕಾಲು ಸೇತುವೆಯನ್ನು ಖಾಸಗಿ ವ್ಯಕ್ತಿಯೊಬ್ಬನ ಹಿತಾಸಕ್ತಿಗಾಗಿ ಬೇರೆಡೆ ಸ್ಥಳಾಂತರಿಸಲು ರಾತ್ರೋ ರಾತ್ರಿ ಹುನ್ನಾರ ನಡೆಸಿದ ಉದ್ದೇಶ ಹಾಗೂ ಇದರ ಹಿಂದೆ ಕಾರ್ಯಾಚರಿಸಿದ ಕೆಲವೊಂದು ಕಾಣದ ಕೈಗಳ ನಡೆ ಹಲವು ಶಂಕೆಗೆ ಕಾರಣವಾಗಿರುವುದಾಗಿ ಸ್ಥಳೀಯರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಅಕ್ರಮ ಕಾರ್ಯದಿಂದ ಉದ್ರಿಕ್ತಗೊಂಡ ಜನರು ಅಧಿಕಾರಿಗಳ ನಿರ್ಧಾರವನ್ನು ತೀವ್ರವಾಗಿ ವಿರೋಧಿಸಿದ್ದಾರೆ. ಹಾಗೂ ತಕ್ಷಣ ಈ ಸ್ಥಳಾಂತರವನ್ನು ತಡೆಗಟ್ಟಿ ಮೊದಲು ಸ್ಥಳ ಗುರುತಿಸಿ ನಿಗದಿ ಪಡಿಸಿದ ಸ್ಥಳದಲ್ಲೇ ಮೇಲ್ಸೇತುವೆ ನಿರ್ಮಿಸುವಂತೆ ಒತ್ತಾಯಿಸಿದ್ದಾರೆ.
ಶಾಸಕರ ಸಮ್ಮುಖದಲ್ಲಿ ಈ ಮೊದಲು ಸ್ಥಳ ಗುರುತಿಸುವಿಕೆ ನಡೆದಿರುವ ಹಿನ್ನೆಲೆಯಲ್ಲಿ ಶಾಸಕರು ಕೂಡಲೇ ಮಧ್ಯ ಪ್ರದೇಶಿಸಿ ಸ್ಥಳಾಂತರವನ್ನು ತಡೆಗಟ್ಟಿ ಮೊದಲು ಸ್ಥಳ ಗುರುತಿಸುವಿಕೆ ನಡೆದ ಅದೇ ಸ್ಥಳದಲ್ಲೇ ಕಾಲು ಸೇತುವೆ ನಿರ್ಮಿಸಿಕೊಡುವಂತೆ ವಿವಿಧ ರಾಜಕೀಯ ಪಕ್ಷಗಳ ನೇತಾರರು ಹಾಗೂ ವಿವಿಧ ಸಂಘಟನೆಗಳು ಒತ್ತಾಯಿಸಿದೆ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಸ್ಥಳೀಯರೊಂದಿಗೆ ಸೇರಿ ಪ್ರತಿಘಟನೆಯನ್ನು ನಡೆಸಲಿರುವುದಾಗಿಯೂ ಎಚ್ಚರಿಸಲಾಗಿದೆ.
ಈಗಾಗಲೇ ನಿಗದಿ ಪಡಿಸಿರುವ ಸ್ಥಳದಿಂದ ಕುಂಜತ್ತೂರು ಹೈಯರ್ ಸೆಕಂಡರಿ ಶಾಲಾ ವಿದ್ಯಾರ್ಥಿಗಳಿಗೂ ಅನುಕೂಲಕರವಾಗುವ ಸ್ಥಳದ ಜೊತೆಯಾಗಿ ಬಸ್ಸು ನಿಲ್ದಾಣ, ಆಟೋ ರಿಕ್ಷಾ ನಿಲ್ದಾಣ ಸೇರಿದಂತೆ ಸಾರ್ವಜನಿಕರಿಗೆ ಸಕಲ ಸೌಕರ್ಯವಿರುವ ಸ್ಥಳವನ್ನು ಕೇವಲ ಒಬ್ಬ ಖಾಸಗಿ ವ್ಯಕ್ತಿಯ ಹಣದ ಬಲದಿಂದ ಸ್ಥಳವನ್ನು ಬದಲಾಯಿಸಿದರೆ ಅದನ್ನು ಯಾವುದೇ ಬೆಲೆ ತೆತ್ತು ಎದುರಿಸಲು ಸಿದ್ದರಿರುವುದಾಗಿ ಇಲ್ಲಿಯ ನಾಗರಿಕರು ಹೇಳುತಿದ್ದಾರೆ.
ವಿಷಯ ವಿವಾದವಾಗುತ್ತಿದ್ದಂತೆ ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಶುಕ್ರವಾರದಂದು ಸ್ಥಳಕ್ಕೆ ಭೇಟಿ ಊರವರನ್ನು ಹಾಗೂ ಸೇರಿದ ವಿವಿಧ ರಾಜಕೀಯ ಮುಖಂಡರುಗಳನ್ನು ಸಮಾಧಾನ ಪಡಿಸಿ ಮೊದಲು ಸ್ಥಳ ಗುರುತಿಸಿ ನಿಗದಿಪಡಿಸಿದ ಸ್ಥಳದಲ್ಲೇ ಮೇಲ್ಸೇತುವೆ ನಿರ್ಮಿಸುವ ಬಗ್ಗೆ ಭರವಸೆಯನ್ನು ಕೊಟ್ಟಿದ್ದಾರೆ. ವಿವಿಧ ರಾಜಕೀಯ ಪಕ್ಷಗಳ ನೇತಾರರಾದ ಇಲ್ಯಾಸ್ ತೂಮಿನಾಡು, ಕುಂಞÂ್ಞ ಮೋನು, ರಾಜೇಶ್, ರವೀಂದ್ರ ಶೆಟ್ಟಿ, ನೌಫಲ್, ಆಟೋ ಚಾಲಕರು, ಊರವರು ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.