ನವದೆಹಲಿ: ಚೀನಾ ಹಾಗೂ ಪಾಕಿಸ್ತಾನ ಈಚೆಗೆ ಹೊರಡಿಸಿದ್ದ ಜಂಟಿ ಹೇಳಿಕೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಬಗ್ಗೆ ಉಲ್ಲೇಖ ಮಾಡಿರುವುದಕ್ಕೆ ಭಾರತ ಆಕ್ಷೇಪ ವ್ಯಕ್ತಪಡಿಸಿದ್ದು, ಜಮ್ಮು ಮತ್ತು ಕಾಶ್ಮೀರವು ತನ್ನ ಅವಿಭಾಜ್ಯ ಅಂಗ ಎಂದು ಪ್ರತಿಪಾದಿಸಿದೆ.
ನವದೆಹಲಿ: ಚೀನಾ ಹಾಗೂ ಪಾಕಿಸ್ತಾನ ಈಚೆಗೆ ಹೊರಡಿಸಿದ್ದ ಜಂಟಿ ಹೇಳಿಕೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಬಗ್ಗೆ ಉಲ್ಲೇಖ ಮಾಡಿರುವುದಕ್ಕೆ ಭಾರತ ಆಕ್ಷೇಪ ವ್ಯಕ್ತಪಡಿಸಿದ್ದು, ಜಮ್ಮು ಮತ್ತು ಕಾಶ್ಮೀರವು ತನ್ನ ಅವಿಭಾಜ್ಯ ಅಂಗ ಎಂದು ಪ್ರತಿಪಾದಿಸಿದೆ.
ಪಾಕ್ ಆಕ್ರಮಿತ ಕಾಶ್ಮೀರದ (ಪಿಒಕೆ) ಮೂಲಕ ಸಾಗುವ ಚೀನಾ- ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) ವಿಷಯವನ್ನು ಜಂಟಿ ಹೇಳಿಕೆಯಲ್ಲಿ ಪ್ರಸ್ತಾಪಿಸಿರುವುದನ್ನೂ ಭಾರತ ಟೀಕಿಸಿದೆ.
ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಚೀನಾ ಪ್ರಧಾನಿ ಲಿ ಕ್ವಿಯಾಂಗ್ ನಡುವಣ ಮಾತುಕತೆಯ ಬಳಿಕ ಉಭಯ ದೇಶಗಳು ಜೂನ್ 7ರಂದು ಬೀಜಿಂಗ್‌ನಲ್ಲಿ ಜಂಟಿ ಹೇಳಿಕೆ ಹೊರಡಿಸಿದ್ದವು.
'ಚೀನಾ ಮತ್ತು ಪಾಕಿಸ್ತಾನದ ಜಂಟಿ ಹೇಳಿಕೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಷಯವನ್ನು ಅನಗತ್ಯವಾಗಿ ಪ್ರಸ್ತಾಪ ಮಾಡಿರುವುದು ನಾವು ಗಮನಿಸಿದ್ದೇವೆ. ಅದನ್ನು ಸಾರಾಸಗಟಾಗಿ ತಿರಸ್ಕರಿಸುತ್ತೇವೆ' ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಗುರುವಾರ ಹೇಳಿದ್ದಾರೆ.
'ಈ ವಿಷಯದಲ್ಲಿ ನಮ್ಮ ನಿಲುವು ದೃಢವಾಗಿದೆ ಮತ್ತು ಅದು ಸಂಬಂಧಪಟ್ಟವರಿಗೂ ಸ್ಪಷ್ಟವಾಗಿ ತಿಳಿದಿದೆ. ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಇಂದು ಮತ್ತು ಮುಂದೆಯೂ ಭಾರತದ ಅವಿಭಾಜ್ಯ ಅಂಗವಾಗಿಯೇ ಉಳಿಯಲಿವೆ' ಎಂದಿದ್ದಾರೆ.
'ಈ ವಿಚಾರದ ಬಗ್ಗೆ ಮಾತನಾಡುವ ಅಧಿಕಾರ ಬೇರೆ ಯಾವುದೇ ದೇಶಕ್ಕೂ ಇಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.
'ಜಮ್ಮು ಮತ್ತು ಕಾಶ್ಮೀರ ವಿವಾದವನ್ನು ವಿಶ್ವಸಂಸ್ಥೆಯ ಸನ್ನದು, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಪ್ರಸ್ತುತ ನಿರ್ಣಯಗಳು ಮತ್ತು ದ್ವಿಪಕ್ಷೀಯ ಒಪ್ಪಂದಗಳ ಅನ್ವಯ ಬಗೆಹರಿಸಬೇಕು' ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿತ್ತು.