ನವದೆಹಲಿ: ಹವಾಮಾನ ಬದಲಾವಣೆಯಿಂದಾಗಿ ಹಿಮಾಲಯದಲ್ಲಿನ ಹಿಮಪಾತದಲ್ಲಿ ಗಮನಾರ್ಹ ಇಳಿಕೆಯಾಗಿದ್ದು, ಹಿಮನದಿಗಳ ಕರಗುವಿಕೆ ಹೆಚ್ಚಾಗುತ್ತಿದೆ. ಇದು ಈಗಾಗಲೇ ನೀರಿನ ಬಿಕ್ಕಟ್ಟನ್ನು ಎದುರಿಸುತ್ತಿರುವ ದೆಹಲಿಯಂತಹ ನಗರಗಳ ಮೇಲೆ ವ್ಯಾಪಕ ಪರಿಣಾಮ ಬೀರಲಿದೆ ಎಂದು ಮಂಗಳವಾರ ಉತ್ತರಾಖಂಡ ಶಾಸಕ ಕಿಶೋರ್ ಉಪಾಧ್ಯಾಯ ಎಚ್ಚರಿಸಿದ್ದಾರೆ.
ಮುಂದಿನ ಎರಡು ಮೂರು ದಶಕಗಳಲ್ಲಿ ಹಿಮಾಲಯದಲ್ಲಿ ಹಿಮದ ಪ್ರಮಾಣ ವಿಪರೀತ ಕಡಿಮೆಯಾಗಬಹುದು ಎಂದು ಭವಿಷ್ಯ ನುಡಿದ ಅಧ್ಯಯನಗಳನ್ನು ಉಲ್ಲೇಖಿಸಿದ ಬಿಜೆಪಿಯ ತೆಹ್ರಿ ಶಾಸಕ ಕಿಶೋರ್ ಉಪಾಧ್ಯಾಯ ಅವರು, ಹಿಮನದಿ ಕರಗುವಿಕೆಯು ಭಾರತೀಯ ಮಾನ್ಸೂನ್‌ನ ಶಕ್ತಿ ಮತ್ತು ಮಾದರಿಯ ಮೇಲೆ ಪರಿಣಾಮ ಬೀರುತ್ತಿದೆ ಎಂದರು.
ಪರ್ವತ ಶ್ರೇಣಿಯ ನಿರ್ಣಾಯಕ ಸ್ಥಿತಿಯ ಬಗ್ಗೆ ಜಾಗೃತಿ ಮೂಡಿಸಲು ಉಪಾಧ್ಯಾಯ ಅವರು ಗ್ಲೋಬಲ್ ಹಿಮಾಲಯನ್ ಸಂಸ್ಥೆಯನ್ನು ಪ್ರಾರಂಭಿಸಿದ್ದಾರೆ.
'ಹಿಂದೆ, ಪರ್ವತಗಳಲ್ಲಿ ಆರರಿಂದ ಏಳು ಅಡಿಗಳಷ್ಟು ಹಿಮಪಾತ ಬೀಳುತ್ತಿತ್ತು. ಈಗ ಅದು ಕೇವಲ ಒಂದರಿಂದ ಎರಡು ಅಡಿಗಳಿಗೆ ಕುಸಿದಿದೆ. ದೊಡ್ಡ ಪ್ರಮಾಣದ ಅರಣ್ಯನಾಶ ಮತ್ತು ಕಾಂಕ್ರಿಟೀಕರಣವೇ ಇದಕ್ಕೆ ಕಾರಣ' ಎಂದು ಉಪಾಧ್ಯಾಯ ಹೇಳಿದರು.
ಹಿಮಾಲಯದ ಕಾಡುಗಳು ಮತ್ತು ಪರಿಸರ ವ್ಯವಸ್ಥೆಗಳನ್ನು ರಕ್ಷಿಸುವುದು ಈ ಸಮಸ್ಯೆಗೆ ಪ್ರಮುಖ ಪರಿಹಾರ ಎಂದು ಅವರು ಹೇಳಿದರು.