ಕೊಲಂಬೊ: ಭಾರತದ ನಾಲ್ವರು ಮೀನುಗಾರರನ್ನು ಶ್ರೀಲಂಕಾ ನೌಕಾಪಡೆಯವರು ಮಂಗಳವಾರ ಬಂಧಿಸಿದ್ದಾರೆ.
ಶ್ರೀಲಂಕಾ ವ್ಯಾಪ್ತಿಯ ಕಡಲಿನ ಪ್ರದೇಶಕ್ಕೆ ಮೀನುಗಾರರು ನುಸುಳಿದ್ದರು ಎಂದು ನೌಕಾಪಡೆಯವರು ಆರೋಪಿಸಿದ್ದಾರೆ.
'ಜಾಫ್ನಾ ಪೆನಿನ್‌ಸುಲಾದಲ್ಲಿನ ಡೆಲ್ಫ್ಟ್ ದ್ವೀಪದ ಉತ್ತರ ಭಾಗದಲ್ಲಿ ಮೀನುಗಾರರನ್ನು ಮಂಗಳವಾರ ಬೆಳಿಗ್ಗೆ ಬಂಧಿಸಲಾಗಿದೆ.
ಶ್ರೀಲಂಕಾ ವ್ಯಾಪ್ತಿಯ ಕಡಲಿಗೆ ನುಸುಳಿಬಂದ ಕಾರಣಕ್ಕೆ ಈ ವರ್ಷ ಇದುವರೆಗೆ 182 ಭಾರತೀಯ ಮೀನುಗಾರರನ್ನು ಬಂಧಿಸಲಾಗಿದ್ದು, 25 ದೋಣಿಗಳನ್ನು ವಶಪಡಿಸಿಕೊಂಡಂತೆ ಆಗಿದೆ ಎಂದು ಹೇಳಿದ್ದಾರೆ.
ಪಾಕ್ ಜಲಸಂಧಿ ವ್ಯಾಪ್ತಿಯಲ್ಲಿಯೇ ಬಹುತೇಕ ಮೀನುಗಾರರು ಶ್ರೀಲಂಕಾ ವ್ಯಾಪ್ತಿಯ ಕಡಲಿನ ಭಾಗಕ್ಕೆ ಸಾಗುತ್ತಾರೆ. ಕಳೆದ ವರ್ಷ ಭಾರತದ 240-245 ಮೀನುಗಾರರನ್ನು ಶ್ರೀಲಂಕಾ ಬಂಧಿಸಿತ್ತು.
ಜೂನ್ 20ರಂದು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಶ್ರೀಲಂಕಾಗೆ ಭೇಟಿ ನೀಡಲಿದ್ದು, ಆಗ ಮೀನುಗಾರರ ನುಸುಳುವಿಕೆಯ ಕುರಿತು ಚರ್ಚೆ ನಡೆಸಲಾಗುವುದು ಎಂದು ಶ್ರೀಲಂಕಾದ ಮೀನುಗಾರಿಕಾ ಇಲಾಖೆ ತಿಳಿಸಿದೆ.