ಕಾಸರಗೋಡು: ದೇಶ ಸ್ವಾತಂತ್ರ್ಯಗೊಂಡ ನಂತರ ಇಂದಿರಾಗಾಂಧಿ ಆಡಳಿತಾವಧಿಯಲ್ಲಿ ಭಾರತೀಯ ಸಂವಿಧಾನದ ವಿರುದ್ಧ ಹೆಚ್ಚಿನ ಅವಹೇಳನ ನಡೆಸಲಾಗಿದೆ ಎಂಬುದಾಗಿ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಎ.ಪಿ ಅಬ್ದುಲ್ಲಕುಟ್ಟಿ ತಿಳಿಸಿದ್ದಾರೆ.
ಅವರು ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ಕಚೇರಿ ಸಭಾಂಗಣದಲ್ಲಿ ತುರ್ತು ಪರಿಸ್ಥಿತಿ ವಿರುದ್ಧ ದಿನದ ಅಂಗವಾಗಿ ಆಯೋಜಿಸಲಾಗಿದ್ದ'ಚಿಂತಾ ಸದಸ್'ಉದ್ಘಾಟಿಸಿ ಮಾತನಾಡಿದರು.
ತುರ್ತು ಪರಿಸ್ಥಿತಿ ಹೇರುವ ಮೂಲಕ ದೇಶದ ಸಂವಿಧಾನವನ್ನು ತುಚ್ಛವಾಗಿ ಕಂಡುಕೊಳ್ಳುವುದರ ಜತೆಗೆ ಪೌರ-ಪತ್ರಿಕಾ ಸ್ವಾತಂತ್ರ್ಯ ಹತ್ತಿಕ್ಕಿರುವ ಕಾಂಗ್ರೆಸ್‍ಗೆ ಇಂದು ಸಂವಿಧಾನದ ಬಗ್ಗೆ ಮಾತನಾಡುವ ಹಕ್ಕು ಎಲ್ಲಿದೆ ಎಂದು ಪ್ರಶ್ನಿಸಿದರು. ಸ್ವಾತಂತ್ರ್ಯಾನಂತರ 106ಬಾರಿ ಸಂವಿಧಾನಕ್ಕೆ ತಿದ್ದುಪಡಿ ತರಲಾಗಿದ್ದು, ಇದರಲ್ಲಿ ಬಹುತೇಕ ಕಾಂಗ್ರೆಸ್ ಕಾಲಾವಧಿಯಲ್ಲಿ ನಡೆದಿದೆ. 90ರಷ್ಟು ಬಾರಿ ಚುನಾಯಿತ ರಾಜ್ಯ ಸರ್ಕಾರಗಳನ್ನು ಕಾಂಗ್ರೆಸ್ ಅಮಾನತಿಲ್ಲಿರಿಸಿತ್ತು. ಸಂಸತ್ ಹಾಗೂ ಸಂವಿಧಾನವನ್ನು ಅವಹೇಳನಗೈದ ಕುಖ್ಯಾತಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರಿಗೆ ಸಲ್ಲುತ್ತದೆ ಎಂದು ತಿಳಿಸಿದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪಿ.ರಮೇಶ್ ಅಧ್ಯಕ್ಷತೆ ವಹಿಸಿದ್ದರು. ಕೋಯಿಕ್ಕೋಡ್ ವಲಯ ಸಮಿತಿ ಅಧ್ಯಕ್ಷ ಜಯಚಂದ್ರನ್ ಮುಖ್ಯ ಭಾಷಣ ಮಾಡಿದರು. ರಾಜ್ಯ ಸಮಿತಿ ಸದಸ್ಯ ವಿ.ರವೀಂದ್ರನ್ ತುರ್ತು ಪರಿಸ್ಥಿತಿಯ ಕರಾಳ ದಿನಗಳ ಬಗ್ಗೆ ಹಾಗೂ ತುರ್ತು ಪರಿಸ್ಥಿತಿ ವಿರುದ್ಧದ ಹೋರಾಟದ ಬಗ್ಗೆ ಮಾಹಿತಿ ನೀಡಿದರು.
ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ. ರಂಜಿತ್, ಜಿಲ್ಲಾ ಸಮಿತಿ ಅಧ್ಯಕ್ಷ ರವೀಶ ತಂತ್ರಿ ಕುಂಟಾರು, ರಾಜ್ಯ ಸಮಿತಿ ಸದಸ್ಯ ಸತೀಶ್ಚಂದ್ರ ಭಂಡಾರಿ, ವಲಯ ಕಾರ್ಯದರ್ಶಿ ಪಿ.ಸುರೇಶ್‍ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ವೇಲಾಯುಧನ್ ಸ್ವಾಗತಿಸಿದರು. ಸೆಲ್ ಕೋರ್ಡಿನೇಟರ್‍ಎನ್. ಬಾಬುರಾಜ್ ವಂದಿಸಿದರು.