ಕಾಸರಗೋಡು: ಸಾಮಾಜಿಕ ಕ್ಷೇತ್ರದಲ್ಲಿ ಸಲ್ಲಿಸಿರುವ ಕೊಡುಗೆಗಾಗಿ ಕಾಸರಗೋಡು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ. ಬೇಬಿ ಬಾಲಕೃಷ್ಣನ್ ಅವರನ್ನು ಯುಆರ್‍ಬಿ ಗ್ಲೋಬಲ್ ಪ್ರಶಸ್ತಿ ಲಭಿಸಿದೆ.
ಸಾಮಾಜಿಕ ಕ್ಷೇತ್ರಗಳಲ್ಲಿ ಅವರ ದುಡಿಮೆ, ಕಾರ್ಯಪ್ರವೃತ್ತಿಗಳನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. 1995ರಲ್ಲಿ, ಮಡಿಕೈ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಆಯ್ಕೆಯಾದ ಇವರು, ಅಂದು ಭಾರತದಲ್ಲಿಯೇ ಅತೀ ಕಿರಿಯ ಪ್ರಾಯದ ಗ್ರಾಮ ಪಂಚಾಯತ್ ಅಧ್ಯಕ್ಷೆ ಎಂಬ ಖ್ಯಾತಿಗೂ ಪಾತ್ರರಾಗಿದ್ದರು. 2000ದಲ್ಲಿ ಮತ್ತೆ ಅದೇ ಪಂಚಾಯತಿ ಅಧ್ಯಕ್ಷೆಯಾಗಿ ಪುನರಾಯ್ಕೆಯಾಗಿದ್ದರು. ಕಾಸರಗೋಡು ಜಿಲ್ಲೆಯನ್ನು ಸಂಪೂರ್ಣ ಡಿಜಿಟಲ್ ಸಾಕ್ಷರತಾ ಜಿಲ್ಲೆಯನ್ನಾಗಿ ಮಾರ್ಪಡಿಸಿರುವುದಲ್ಲದೆ, ಕಾಸರಗೋಡು ಜಿಲ್ಲೆಗೆ ಅಧಿಕೃತ ವೃಕ್ಷ, ಪಕ್ಷಿ, ಮೃಗ, ಸಸ್ಯಗಳನ್ನು ಘೋಷಣೆ ಮಾಡಿ, ಇವುಗಳ ಪೋಷಣೆಗೂ ಪಣತೊಡಲಾಗಿತ್ತು. ನವದೆಹಲಿಯ ಇನ್‍ಸ್ಟಿಟ್ಯುಟ್ ಆಫ್ ಸೋಶಿಯಲ್ ಸಯನ್ಸ್‍ನಿಂದ ಉತ್ತಮ ಮಹಿಳಾ ನೇತಾರೆ ಸೇರಿದಂತೆ ಹಲವಾರು ಪ್ರಶಸ್ತಿ ಲಭಿಸಿದೆ.