ಪೆರ್ಲ : ನವ್ಯ ಕಾವ್ಯದ ನಂತರದಲ್ಲಿ ಸಾಮಾನ್ಯರೂ ಕೂಡ ತಮ್ಮದೇ ಸರಳ ಶೈಲಿಯಲ್ಲಿ ಕವಿತೆಗಳನ್ನು ರಚಿಸುವುದಕ್ಕೆ ಸಾಧ್ಯವಾಗಿದ್ದು ಇದು ಹೆಚ್ಚಿನ ಸಾಹಿತ್ಯ ಆಪ್ತತತೆಗೆ ಕಾರಣವಾಗಿದೆ ಎಂದು ಪದ್ಮಶ್ರೀ ಪುರಸ್ಕೃತ ಭತ್ತದ ತಳಿ ಸಂರಕ್ಷಕ, ಸಾಹಿತಿ ಸತ್ಯನಾರಾಯಣ ಬೆಳೇರಿ ಅಭಿಪ್ರಾಯಪಟ್ಟರು.
ಅವರು ಪೆರ್ಲದ ಪಳ್ಳಕಾನದಲ್ಲಿರುವ 'ಪರಿಶ್ರಮ ಗಾರ್ಡನ್ಸ್' ನಲ್ಲಿ ನಡೆದ 'ಕಾವ್ಯೋಲ್ಲಾಸ' ಕವಿಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹೊಸ ರೀತಿಯಲ್ಲಿ ಕಾವ್ಯ ಬರೆಯುವುದೇ ಜೀವಂತ ಜನಾಂಗದ ಲಕ್ಷಣ' ಎಂಬ ಕವಿ ಅಡಿಗರ ಮಾತನ್ನು ಉಲ್ಲೇಖಿಸಿ ಕವಿಗಳಿಗೆ ಶುಭಹಾರೈಸಿದರು. ಉಳಿಯತ್ತಡ್ಕದ ಪ್ರಗತಿ ಕಾಲೇಜಿನ ಪ್ರಾಂಶುಪಾಲ ಉದಯ ಕುಮಾರ್ ಎಂ. ಸಭೆಯ ಅಧ್ಯಕ್ಷತೆವಹಿಸಿದ್ದರು. ಉಪನ್ಯಾಸಕ,ಕವಿ ಬಾಲಕೃಷ್ಣ ಬೇರಿಕೆ ಮುಖ್ಯ ಅತಿಥಿಗಳಾಗಿದ್ದರು. ಜಿ.ಪಂ.ಸದಸ್ಯ ನಾರಾಯಣ ನಾಯ್ಕ್, ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಅಧ್ಯಕ್ಷ ಟಿ.ಪ್ರಸಾದ್ ಸಭೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ದೇವಿ ಪಾತ್ರಿ ಕೃಷ್ಣ ನಾಯ್ಕ ಅರೆಮಂಗಿಲ,ಜಲ ತಜ್ಞ ಐತ್ತಪ್ಪ ಮೂಲ್ಯ, ಪದ್ಮಶ್ರೀ ಪುರಸ್ಕೃತ ಸತ್ಯನಾರಾಯಣ ಬೇಳೇರಿ, ಕವಿ,ಪತ್ರಕರ್ತ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಅವರನ್ನು ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ನಡೆದ ಕವಿಗೋಷ್ಠಿಗೆ ಹಿರಿಯ ಸಾಹಿತಿ ಹರೀಶ್ ಪೆರ್ಲ ಚಾಲನೆ ನೀಡಿದರು. ನಿರ್ಮಲ ಶೇಷಪ್ಪ ಖಂಡಿಗೆ, ನವ್ಯಶ್ರೀ ಸ್ವರ್ಗ,ಆನಂದ ರೈ ಅಡ್ಕಸ್ಥಳ, ಪರಮೇಶ್ವರ ನಾಯ್ಕ, ಹರ್ಷಿತಾ ಪಿ,ವನಜಾಕ್ಷಿ ಚಂಬ್ರಕಾನ, ಚಂದ್ರಕಲಾ ನೀರಾಳ,ಶರಣ್ಯ ಸ್ವರಚಿತ ಕವನಗಳನ್ನು ವಾಚಿಸಿದರು.ಸುಂದರ ಬಾರಡ್ಕ ಭಾವಗೀತೆ ಹಾಡಿದರು. ಸಂಘಟಕ ಸುಭಾಷ್ ಪೆರ್ಲ ಸ್ವಾಗತಿಸಿ ಬಾಲಕೃಷ್ಣ ನಾಯ್ಕ್ ಏಳ್ಕಾನ ವಂದಿಸಿದರು.