ನವದೆಹಲಿ: ಭಾರತದಲ್ಲಿನ ಧಾರ್ಮಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತೆ ಅಮೆರಿಕ ಬಿಡುಗಡೆ ಮಾಡಿರುವ ವರದಿಯು ಪಕ್ಷಪಾತದಿಂದ ಕೂಡಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
ವಿವಿಧ ದೇಶಗಳಲ್ಲಿನ ಧಾರ್ಮಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತೆ ಅಮೆರಿಕದ ವಿದೇಶಾಂಗ ಸಚಿವಾಲಯವು ಬುಧವಾರ ವರದಿ ಪ್ರಕಟಿಸಿದೆ.
ಈ ಸಂಬಂಧ ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಣದೀಪ್ ಜೈಸ್ವಾಲ್ ಅವರು ಪ್ರತಿಕ್ರಿಯಿಸಿದ್ದು, ಈ ವರದಿಯು ಪಕ್ಷಪಾತದಿಂದ ಕೂಡಿದೆ. ಪೂರ್ವ ನಿರ್ಧಾರಿತ ದೃಷ್ಟಿಕೋನದ ಆಧಾರದಲ್ಲಿ ಇದನ್ನು ತಯಾರಿಸಲಾಗಿದ್ದು, ಅಮೆರಿಕವು ಭಾರತದ ಸಾಮಾಜಿಕ ವ್ಯವಸ್ಥೆಯನ್ನು ಅರ್ಥ ಮಾಡಿಕೊಂಡಿಲ್ಲ ಎಂದು ಟೀಕಿಸಿದ್ದಾರೆ.
'ನಾವು ಈ ವರದಿಯನ್ನು ತಿರಸ್ಕರಿಸುತ್ತೇವೆ' ಎಂದಿರುವ ಜೈಸ್ವಾಲ್, 'ನಿರ್ದಿಷ್ಟ ಇಚ್ಚಾಶಕ್ತಿ ಹೊಂದಿರುವ ಮೂಲಗಳಿಂದ ಪಡೆದ ಮಾಹಿತಿ, ಆಯ್ದ ವಿಚಾರಗಳನ್ನು ಒಳಗೊಂಡಿರುವ ಈ ವರದಿಯನ್ನು ತಪ್ಪಾಗಿ ನಿರೂಪಣೆ ಮಾಡಲಾಗಿದೆ' ಎಂದು ದೂರಿದ್ದಾರೆ.
ಧಾರ್ಮಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತೆ ಭಾರತದಲ್ಲಿ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ಅಮೆರಿಕದ ಅಧಿಕಾರಿಗಳು 2023ರಲ್ಲೂ ಹಲವು ಸಲ ಕಳವಳ ವ್ಯಕ್ತಪಡಿಸಿದ್ದಾರೆ ಎಂಬುದನ್ನೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.