ಕಾಸರಗೋಡು: ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಅಡಿಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸಬೇಕೆಂಬ ಹಲವು ವರ್ಷಗಳ ಬೇಡಿಕೆ ಬಗ್ಗೆ ಬಿಜೆಪಿ ಮತ್ತೆ ಆಗ್ರಹ ಮುಂದಿಟ್ಟು ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಿದೆ.
ಕಾಸರಗೋಡಿನ ಎಂಡೋಸಲ್ಫಾನ್ ವಿಚಾರದಲ್ಲಿ ನಿರಂತರ ಮಧ್ಯಪ್ರವೇಶಿಸುವ ಮೂಲಕ ಸುರೇಶ್ ಗೋಪಿ ಸಂತ್ರಸ್ತರ ಪರವಾಗಿ ನಿಂತಿದ್ದು, ಪ್ರಸಕ್ತ ಕೇಂದ್ರ ಸಚಿವರಾಗಿ ಆ ವಿಚಾರವನ್ನು ಚುರುಕುಗೊಳಿಸಿದ್ದಾರೆ. ಲೋಕಸಭಾ ಚುನಾವಣೆ ಪ್ರಚಾರ ಸಂದರ್ಭ ಎನ್‍ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಂ.ಎಲ್.ಅಶ್ವಿನಿ ವೈದ್ಯಕೀಯ ಕಾಲೇಜು ಸ್ಥಾಪಿಸುವುದಾಗಿ ಭರವಸೆ ನೀಡಿದ್ದರು.
ವೈದ್ಯಕೀಯ ಕಾಲೇಜು ಆಸ್ಪತ್ರೆ ಬೇಡಿಕೆ ಮುಂದಿಟ್ಟು ಎಂ.ಎಲ್. ಅಶ್ವಿನಿ ಅವರು ಕಣ್ಣೂರಿನಲ್ಲಿ ಸುರೇಶ್ ಗೋಪಿ ಅವರನ್ನು ಭೇಟಿಮಾಡಿ ಮನವಿ ಸಲ್ಲಿಸಿದ್ದಾರೆ. ಈ ಸಂದರ್ಭ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಪಿ.ಕೆ.ಕೃಷ್ಣದಾಸ್, ರಾಜ್ಯ ಕಾರ್ಯದರ್ಶಿ ಕೆ. ರಂಜಿತ್ ಉಪಸ್ಥಿತರಿದ್ದರು. ವೈದ್ಯಕೀಯ ಕಾಲೇಜು ಆಸ್ಪತ್ರೆ ನಿರ್ಮಾಣ ವಿಚಾರದಲ್ಲಿ ಮಧ್ಯಪ್ರವೇಶಿಸುವುದಾಗಿ ಸುರೆಸ್‍ಗೋಪಿ ಭರವಸೆ ನೀಡಿದ್ದಾರೆ. ವಿಶ್ವವಿದ್ಯಾನಿಲಯದ ಪ್ರಾರಂಭದಿಂದಲೂ ಚರ್ಚೆಯಲ್ಲಿರುವ ವೈದ್ಯಕೀಯ ಕಾಲೇಜು ಅದರ ಮಾಸ್ಟರ್ ಪ್ಲಾನ್ ಪ್ರಕಾರ ನಡೆಯಲಿದ್ದು, ಇದಕ್ಕಾಗಿ 50 ಎಕರೆ ಜಾಗವನ್ನೂ ಮೀಸಲಿಡಲಾಗಿದೆ. ಮಹಿಳಾಮೋರ್ಚಾ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯೆಯಾಗಿರುವ ಅಶ್ವಿನಿ ರಾಷ್ಟ್ರೀಯ ನಾಯಕತ್ವದ ಜತೆಗೂ ಸಂಪರ್ಕ ಹೊಂದಿದ್ದು, ಯೋಜನೆಗೆ ಶಕ್ತಿ ತುಂಬುವ ಪ್ರಯತ್ನ ಮಾಡಲಾಗಿದೆ. ವೈದ್ಯಕೀಯ ಕಾಲೇಜು ಆಸ್ಪತ್ರೆ ಸ್ಥಾಪಿಸುವ ಭರವಸೆಯಲ್ಲಿ ದೃಢವಾಗಿ ನಿಂತಿದ್ದು, ಅದಕ್ಕಾಗಿ ಶ್ರಮಿಸುವುದಾಗಿ ಅಶ್ವಿನಿ ಎಂ.ಎಲ್. ತಿಳಿಸಿದ್ದಾರೆ.