ನವದೆಹಲಿ ( PTI):1996ರ ಗಂಗಾ ಜಲ ಒಪ್ಪಂದದ ನವೀಕರಣಕ್ಕಾಗಿ ಭಾರತ ಮತ್ತು ಬಾಂಗ್ಲಾದೇಶ ತಾಂತ್ರಿಕ ಮಟ್ಟದ ಮಾತುಕತೆಗಳನ್ನು ಆರಂಭಿಸಲಿವೆ ಎಂದು ಶನಿವಾರ ಇಲ್ಲಿ ಹೇಳಿದ ಪ್ರಧಾನಿ ನರೇಂದ್ರ ಮೋದಿಯವರು,ತೀಸ್ತಾ ನದಿಯ ಸಂರಕ್ಷಣೆ ಮತ್ತು ನಿರ್ವಹಣೆಗಾಗಿ ಭಾರತೀಯ ತಾಂತ್ರಿಕ ತಂಡವೊಂದು ಶೀಘ್ರವೇ ಬಾಂಗ್ಲಾದೇಶಕ್ಕೆ ಭೇಟಿ ನೀಡಲಿದೆ ಎಂದು ತಿಳಿಸಿದರು.
ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆಗಳ ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೋದಿ,ಸಂಪರ್ಕ,ವಾಣಿಜ್ಯ ಮತ್ತು ಸಹಯೋಗ ತಮ್ಮ ಮಾತುಕತೆಗಳಲ್ಲಿ ಆದ್ಯತೆಯನ್ನು ಪಡೆದಿದ್ದವು ಎಂದು ತಿಳಿಸಿದರು.
ಉಭಯ ನಾಯಕರು ಡಿಜಿಟಲ್ ಮತ್ತು ಇಂಧನ ಸಂಪರ್ಕಕ್ಕೆ ಹೆಚ್ಚಿನ ಒತ್ತು ನೀಡಲಿದ್ದಾರೆ ಎಂದ ಮೋದಿ,'ನಮ್ಮ ಆರ್ಥಿಕ ಸಂಬಂಧಗಳನ್ನು ಹೊಸ ಎತ್ತರಕ್ಕೆ ಒಯ್ಯಲು ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ (ಸಿಇಪಿಎ) ಕುರಿತು ಮಾತುಕತೆಗಳನ್ನು ಆರಂಭಿಸಲು ಉಭಯ ದೇಶಗಳು ಸಜ್ಜಾಗಿವೆ ' ಎಂದು ತಿಳಿಸಿದರು.
'ಉಭಯ ದೇಶಗಳ ನಡುವಿನ ರಕ್ಷಣಾ ಸಂಬಂಧಗಳನ್ನು ಇನ್ನಷ್ಟು ಬಲಗೊಳಿಸಲು ರಕ್ಷಣಾ ಉತ್ಪಾದನೆಯ ಕುರಿತು ನಾವು ಚರ್ಚಿಸಿದ್ದೇವೆ. ಭಯೋತ್ಪಾದನೆ ನಿಗ್ರಹ,ಮೂಲಭೂತವಾದ ಮತ್ತು ಗಡಿಯ ಶಾಂತಿಯುತ ನಿರ್ವಹಣೆ ಕುರಿತು ನಮ್ಮ ಸಹಕಾರವನ್ನು ಬಲಗೊಳಿಸಲು ನಿರ್ಧರಿಸಿದ್ದೇವೆ. ಇಂಡೋ-ಪೆಸಿಫಿಕ್ ಮಹಾಸಾಗರಗಳ ಉಪಕ್ರಮವನ್ನು ಸೇರುವ ಬಾಂಗ್ಲಾದೇಶದ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ ' ಎಂದು ಹೇಳಿದ ಮೋದಿ,ವೈದ್ಯಕೀಯ ಚಿಕಿತ್ಸೆಗಾಗಿ ಭಾರತಕ್ಕೆ ಭೇಟಿ ನೀಡುವ ಬಾಂಗ್ಲಾದೇಶಿಗಳಿಗೆ ಇ-ವೀಸಾ ಸೌಲಭ್ಯವನ್ನು ಆರಂಭಿಸಲಾಗುವುದು. ಬಾಂಗ್ಲಾದೇಶದ ವಾಯುವ್ಯ ಪ್ರದೇಶದ ಜನರ ಅನುಕೂಲಕ್ಕಾಗಿ ರಂಗಪುರದಲ್ಲಿ ಸಹಾಯಕ ರಾಯಭಾರ ಕಚೇರಿಯನ್ನೂ ಭಾರತವು ಆರಂಭಿಸಲಿದೆ ಎಂದು ತಿಳಿಸಿದರು.
'ಬಾಂಗ್ಲಾದೇಶದ 12ನೇ ಸಂಸತ್ ಚುನಾವಣೆಗಳು ಮತ್ತು 2024ರ ಜನವರಿಯಲ್ಲಿ ನಮ್ಮ ನೂತನ ಸರಕಾರ ರಚನೆಯ ಬಳಿಕ ಇದು ಯಾವುದೇ ದೇಶಕ್ಕೆ ನನ್ನ ಮೊದಲ ದ್ವಿಪಕ್ಷೀಯ ಭೇಟಿಯಾಗಿದೆ. ಭಾರತವು ನಮ್ಮ ಪ್ರಮುಖ ನೆರೆದೇಶ,ವಿಶ್ವಾಸಾರ್ಹ ಸ್ನೇಹಿತ ಮತ್ತು ಪ್ರಾದೇಶಿಕ ಪಾಲುದಾರನಾಗಿದೆ. 1971ರಲ್ಲಿ ನಮ್ಮ ವಿಮೋಚನಾ ಯುದ್ಧದ ಸಮಯದಲ್ಲಿ ಜನ್ಮ ತಳೆದ ಭಾರತದೊಂದಿಗಿನ ನಮ್ಮ ಸಂಬಂಧಗಳನ್ನು ಬಾಂಗ್ಲಾದೇಶವು ಬಹುವಾಗಿ ಗೌರವಿಸುತ್ತದೆ ' ಎಂದು ಶೇಖ್ ಹಸೀನಾ ಹೇಳಿದರು.
ಡಿಜಿಟಲ್ ಕ್ಷೇತ್ರದಲ್ಲಿ ಬಲವಾದ ಸಂಬಂಧಗಳನ್ನು ಬೆಸೆಯುವುದು ಮತ್ತು ಹಸಿರು ಪಾಲುದಾರಿಕೆಯನ್ನು ಹೊಂದುವುದು ಉಭಯ ದೇಶಗಳು ಸಹಿ ಮಾಡಿದ ಪ್ರಮುಖ ಒಪ್ಪಂದಗಳಲ್ಲಿ ಸೇರಿವೆ. ರೈಲು ಸಂಪರ್ಕದ ಒಪ್ಪಂದಕ್ಕೂ ಉಭಯ ದೇಶಗಳು ಈ ಸಂದರ್ಭದಲ್ಲಿ ಸಹಿ ಹಾಕಿದವು.