ತಿರುವನಂತಪುರ: ಇತ್ತೀಚಿಗೆ ಫ್ರಾನ್ಸ್‌ನಲ್ಲಿ ಸಂಪನ್ನಗೊಂಡ ಕಾನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಿಂದ ಮರಳಿರುವ ಮಲಯಾಳಂ ನಟಿ ಕನಿ ಕುಸ್ರೂತಿ ಅವರು ಸಂದರ್ಶನವೊಂದರಲ್ಲಿ 'ನನ್ನ ರಾಜಕೀಯಕ್ಕೆ ಮಾತ್ರ ಹೊಂದಿಕೆಯಾಗುವ ಚಲನಚಿತ್ರಗಳನ್ನು ಆಯ್ಕೆ ಮಾಡುವ ಸವಲತ್ತು ನನಗಿಲ್ಲ' ಎಂದು ಹೇಳಿದ್ದಾರೆ.
ಕನಿ ನಟನೆಯ ಪಾಯಲ್ ಕಪಾಡಿಯಾ ನಿರ್ದೇಶನದ 'ಆಲ್ ವಿ ಇಮ್ಯಾಜಿನ್ ಆಯಸ್ ಲೈಟ್' ಕಾನ್ ನಲ್ಲಿ ಪ್ರತಿಷ್ಠಿತ ಗ್ರ್ಯಾಂಡ್ ಪ್ರಿಕ್ಸ್ ಪ್ರಶಸ್ತಿಯನ್ನು ಗೆದ್ದಿದೆ. 2020ರಲ್ಲಿ ರಾಜ್ಯ ಪ್ರಶಸ್ತಿಯನ್ನು ಕಾನಿ ಮುಡಿಗೇರಿಸಿದ್ದ 'ಬಿರಿಯಾನಿ' ಚಿತ್ರದ ರಾಜಕೀಯದ ಸುತ್ತಲಿನ ವಿವಾದದ ಬಳಿಕ ಕಾನ್ ನಲ್ಲಿ ಫೆಲೆಸ್ತೀನ್ ಜೊತೆ ಏಕತೆಯ ಸಂಕೇತವಾಗಿ ಅವರು ಕಲ್ಲಂಗಡಿ ತುಂಡನ್ನು ಹೋಲುವ ಬ್ಯಾಗ್ ಹಿಡಿದುಕೊಂಡಿದ್ದ ಚಿತ್ರಗಳು ವೈರಲ್ ಆಗಿರುವ ಹಿನ್ನೆಲೆಯಲ್ಲಿ ಅವರ ಈ ಹೇಳಿಕೆ ಹೊರಬಿದ್ದಿದೆ. ಈ ಬ್ಯಾಗ್ ಫೆಲೆಸ್ತೀನ್ ಧ್ವಜದಲ್ಲಿನ ಕೆಂಪು,ಹಸಿರು,ಕಪ್ಪು ಮತ್ತು ಬಿಳಿ ಬಣ್ಣಗಳನ್ನು ಹೊಂದಿತ್ತು.
ಕನಿಯವರ ಬಿರಿಯಾನಿ ಚಿತ್ರವು ಇಸ್ಲಾಮೋಫೋಬಿಕ್ ಎಂದು ಹೇಳಲಾಗಿದ್ದು, ಫೆಲೆಸ್ತೀನ್‌ನೊಂದಿಗೆ ಅವರ ಏಕತೆಯ ಪ್ರದರ್ಶನವು ಬೂಟಾಟಿಕೆಯಾಗಿತ್ತು ಎಂದು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಟೀಕಿಸಿದ್ದಾರೆ.
ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಕನಿ, 'ಬಿರಿಯಾನಿ' ಚಿತ್ರದ ರಾಜಕೀಯದ ಬಗ್ಗೆ ಅದರ ನಿರ್ದೇಶಕರ ಬಳಿ ತನ್ನ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಿದ್ದರೂ ಪ್ರಮುಖವಾಗಿ ಹಣಕಾಸು ತೊಂದರೆಯಿಂದಾಗಿ ತಾನು ಆ ಚಿತ್ರವನ್ನು ಮಾಡಲು ಒಪ್ಪಿಕೊಂಡಿದ್ದೆ ಎಂದು ಹೇಳಿದರು. 'ನನ್ನ ರಾಜಕೀಯವು ಚಿತ್ರಕಥೆಯೊಂದಿಗೆ ಹೊಂದಿಕೆಯಾಗುವುದಿಲ್ಲ ಎಂದು ನಾನು ಸಜಿನ್‌ಗೆ ತಿಳಿಸಿದ್ದೆ. ಸಚಿನ್ ಹಿಂದುಳಿದ ಮುಸ್ಲಿಮ್ ಸಮುದಾಯದಿಂದ ಬಂದವರು ಮತ್ತು ತನ್ನ ದೃಷ್ಟಿಯಲ್ಲಿ ಸರಿ ಎನ್ನಿಸುವ ರಾಜಕೀಯವನ್ನು ಮಾತನಾಡುತ್ತಾರೆ. ಆದರೆ ಅದು ನನ್ನ ರಾಜಕೀಯವಲ್ಲ ' ಎಂದರು.
ಕೇರಳ ಸ್ಟೋರಿ ನಿರ್ದೇಶಕ ಸುದಿಪ್ತೊ ಸೇನ್ ಅವರ ಮುಂದಿನ ಚಿತ್ರಕ್ಕಾಗಿ ಆಡಿಷನ್ ಕರೆಯನ್ನು ತಾನು ತಿರಸ್ಕರಿಸಿದ್ದಾಗಿ ಬಹಿರಂಗಗೊಳಿಸಿದ ಕನಿ, ಸನ್ನಿವೇಶಗಳು ಅನುಕೂಲಕರವಾಗಿದ್ದರೆ ತನ್ನ ರಾಜಕೀಯಕ್ಕೆ ಹೊಂದಿಕೆಯಾಗದ ಚಿತ್ರಗಳನ್ನು ನಾನು ತಿರಸ್ಕರಿಸುತ್ತೇನೆ ಎಂದು ಹೇಳಿದರು.