ಮುಂಬೈ: ಕೆಲವು ಆಕ್ಷೇಪಾರ್ಹ ಭಾಗಗಳಿಗೆ ಕತ್ತರಿ ಹಾಕಲು 'ಹಮಾರೆ ಬಾರಹ್' ಚಿತ್ರತಂಡವು ಒಪ್ಪಿದ ಕಾರಣಕ್ಕೆ ಆ ಸಿನಿಮಾ ಬಿಡುಗಡೆಗೆ ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ.
ಮುಂಬೈ: ಕೆಲವು ಆಕ್ಷೇಪಾರ್ಹ ಭಾಗಗಳಿಗೆ ಕತ್ತರಿ ಹಾಕಲು 'ಹಮಾರೆ ಬಾರಹ್' ಚಿತ್ರತಂಡವು ಒಪ್ಪಿದ ಕಾರಣಕ್ಕೆ ಆ ಸಿನಿಮಾ ಬಿಡುಗಡೆಗೆ ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ.
ಈ ಸಿನಿಮಾ ಜೂನ್ 7ಕ್ಕೆ ಬಿಡುಗಡೆ ಆಗಬೇಕಿತ್ತು. ನಂತರ ಇದರ ಬಿಡುಗಡೆ ದಿನಾಂಕವನ್ನು ಜೂನ್ 14ಕ್ಕೆ ನಿಗದಿ ಮಾಡಲಾಗಿತ್ತು.
ಈ ಚಿತ್ರವು ಕುರಾನ್ ಬಗ್ಗೆ ತಪ್ಪು ಮಾಹಿತಿ ನೀಡುತ್ತದೆ, ಇಸ್ಲಾಮಿಕ್ ನಂಬಿಕೆಗಳನ್ನು ಅವಹೇಳನ ಮಾಡುತ್ತದೆ ಎಂದು ದೂರಿ ಕೆಲವು ಅರ್ಜಿಗಳನ್ನು ಹೈಕೋರ್ಟ್‌ನಲ್ಲಿ ಸಲ್ಲಿಸಲಾಗಿತ್ತು. ಚಿತ್ರದ ಬಿಡುಗಡೆಗೆ ನಿಷೇಧ ಹೇರಬೇಕು ಎಂದು ಅರ್ಜಿಗಳು ಕೋರಿದ್ದವು.
ಚಿತ್ರವನ್ನು ವೀಕ್ಷಿಸಿದ ನ್ಯಾಯಮೂರ್ತಿಗಳಾದ ಬಿ.ಪಿ. ಕೊಲಾಬಾವಾಲಾ ಮತ್ತು ಫಿರ್ದೋಷ್ ಪೂನಿವಾಲಾ ಅವರು ಇದ್ದ ವಿಭಾಗೀಯ ಪೀಠವು ಸಿನಿಮಾದಲ್ಲಿ ಕೆಲವು ಬದಲಾವಣೆಗಳನ್ನು ತರುವಂತೆ ಸಲಹೆ ಮಾಡಿತು. ಇದಕ್ಕೆ ಅರ್ಜಿದಾರರು ಹಾಗೂ ಚಿತ್ರತಂಡದ ಸದಸ್ಯರು ಒಪ್ಪಿದರು.
ಚಿತ್ರತಂಡವು ಅಗತ್ಯ ಬದಲಾವಣೆಗಳನ್ನು ತಂದು ಸಿನಿಮಾ ಬಿಡುಗಡೆ ಮಾಡಬಹುದು ಎಂದು ಪೀಠವು ಹೇಳಿದೆ. ಅಗತ್ಯ ಬದಲಾವಣೆಗಳನ್ನು ಮಾಡಿ, ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿಯಿಂದ (ಸಿಬಿಎಫ್‌ಸಿ) ಪ್ರಮಾಣಪತ್ರ ಪಡೆಯಲಾಗುತ್ತದೆ ಎಂದು ಚಿತ್ರತಂಡವು ಹೇಳಿದೆ.
ಸಿಬಿಎಫ್‌ಸಿಯಿಂದ ಪ್ರಮಾಣಪತ್ರ ಸಿಗುವ ಮೊದಲೇ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ್ದಕ್ಕೆ ಹೈಕೋರ್ಟ್, ಈ ಚಿತ್ರತಂಡಕ್ಕೆ ₹5 ಲಕ್ಷ ದಂಡ ವಿಧಿಸಿದೆ.