ಕೊಲ್ಲಂ: ಸಿಡಿಲು ಬಡಿದು ಇಬ್ಬರು ಖಾತ್ರಿ ಕೂಲಿ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಕೊಲ್ಲಂನ ಪುನಲೂರಿನಲ್ಲಿ ಈ ದುರ್ಘಟನೆ ನಡೆದಿದೆ. ಮೃತರನ್ನು ಇಡಕುನ್ನಂ ಮೂಲದ ಸರೋಜಮ್ ಮತ್ತು ರಜಿನಿ ಎಂದು ಗುರುತಿಸಲಾಗಿದೆ. ಇಬ್ಬರನ್ನೂ ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಪ್ರಾಣ ಉಳಿಸಲಾಗಲಿಲ್ಲ.
ಎರ್ನಾಕುಳಂನ ಪನಂಗೋಡ್ ಬಳಿ ಸಿಡಿಲು ಬಡಿದು ಮೀನುಗಾರರೊಬ್ಬರು ಗಾಯಗೊಂಡಿದ್ದಾರೆ. ತೊಪ್ಪುಂಪಾಡಿ ನಿವಾಸಿ ಸಿ.ಬಿ.ಜಾರ್ಜ್ ಗಾಯಗೊಂಡವರು. ಸಿಡಿಲು ಬಡಿದು ದೋಣಿ ಸಂಪೂರ್ಣ ನಾಶವಾಗಿದೆ. ಕಣ್ಣೂರು ತೊಟಂ ನಲ್ಲಿ ಸಿಡಿಲು ಬಡಿದು ಮನೆಗೆ ಹಾನಿಯಾಗಿದೆ.
ರಾಜ್ಯದಲ್ಲಿ ಹವಾಮಾನದಲ್ಲಿ ಕೊಂಚ ಬದಲಾವಣೆಯಾಗಿದೆ. ಇಂದು ಅಲ್ಲಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಕೇಂದ್ರ ತಿಳಿಸಿದೆ. ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಗಳಲ್ಲಿ ಇಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಅಲ್ಲಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದ್ದು, ಗಂಟೆಗೆ 40 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಕೇಂದ್ರ ಹವಾಮಾನ ಇಲಾಖೆ ತಿಳಿಸಿದೆ. ರಾಷ್ಟ್ರೀಯ ಸಾಗರ ಮತ್ತು ವಾಯುಮಂಡಲ ಸಂಶೋಧನಾ ಕೇಂದ್ರವು ಸಮುದ್ರ ಪ್ರಕ್ಷುಬ್ದತೆಯ ವಿದ್ಯಮಾನ ಮತ್ತು ಎತ್ತರದ ಅಲೆಗಳ ಸಾಧ್ಯತೆಯ ಬಗ್ಗೆಯೂ ಎಚ್ಚರಿಕೆ ನೀಡಿದೆ.