ಬೀಜಿಂಗ್: ದೇಶದ ನಾಗರಿಕ- ಸೇನಾ ವಿಮಾನ ನಿಲ್ದಾಣಗಳಲ್ಲಿ ವಿಮಾನ ಟೇಕಾಫ್ ಹಾಗೂ ಇಳಿಯುವ ವೇಳೆ ಕಿಟಕಿ ಮೂಲಕ ಚಿತ್ರಗಳನ್ನು ತೆಗೆಯದಂತೆ ಚೀನಾದ ಉನ್ನತ ಬೇಹುಗಾರಿಕೆ ಸಂಸ್ಥೆ ಪ್ರಯಾಣಿಕರಿಗೆ ಎಚ್ಚರಿಕೆ ನೀಡಿದೆ. ವಿದೇಶಿ ಪ್ರಯಾಣಿಕರೊಬ್ಬರು ಕಿಟಕಿಯ ಪರದೆ ಸರಿಸಿ ಚಿತ್ರ ತೆಗೆದಿರುವುದನ್ನು ಪತ್ತೆ ಮಾಡಿದ ಬೆನ್ನಲ್ಲೇ, ಈ ನಿರ್ದೇಶನ ನೀಡಿದೆ ಎಂದು ಮಾಧ್ಯಮ ಸಂಸ್ಥೆಯೊಂದು ವರದಿ ಮಾಡಿದೆ.
ನಾಗರಿಕ-ಸೇನಾ ವಿಮಾನ ನಿಲ್ದಾಣದ ಮೂಲಕ ಪ್ರಯಾಣಿಸುವ ವೇಳೆ ಕಿಟಕಿ ಪರದೆ ಮುಚ್ಚುವ ಜೊತೆಗೆ ಎಲ್ಲ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಚೀನಾ ರಾಜ್ಯ ಭದ್ರತಾ ಸಚಿವಾಲಯವು 'ವಿ-ಚಾಟ್'ನಲ್ಲಿ ತಿಳಿಸಿದೆ.
'ಅನಧಿಕೃತವಾಗಿ ಚಿತ್ರ, ವಿಡಿಯೊಗಳನ್ನು ತೆಗೆದು ಆನ್‌ಲೈನ್ ಮೂಲಕ ಅಪ್‌ಲೋಡ್ ಮಾಡುವಂತಿಲ್ಲ. ಸೇನಾ ಸೌಲಭ್ಯಗಳ ಕುರಿತು ಗೋಪ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ವಿಶ್ವದಾದ್ಯಂತ ಪ್ರಮಾಣಿತ ವಿಧಾನಕ್ಕೆ ಅನುಗುಣವಾಗಿ ನಡೆದುಕೊಳ್ಳಬೇಕು' ಎಂದು ಹಾಂಗ್‌ಕಾಂಗ್ ಮೂಲದ 'ಸೌತ್ ಚೈನಾ ಮಾರ್ನಿಂಗ್ ಪೋಸ್ಟ್' ವರದಿ ಮಾಡಿದೆ.
ಇತ್ತೀಚಿಗೆ ವಿದೇಶಿಗರೊಬ್ಬರು ಭಾವಚಿತ್ರ ತೆಗೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಆದೇಶ ನೀಡಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿತು.
ಸ್ಥಳೀಯ ಮಾಧ್ಯಮಗಳ ಪ್ರಕಾರ, ಪೂರ್ವ ಚೀನಾದ ಯಿವು ಪಟ್ಟಣದಿಂದ ಬೀಜಿಂಗ್‌ಗೆ ತೆರಳುವ ವೇಳೆ ವಿದೇಶಿ ಪ್ರಯಾಣಿಕರೊಬ್ಬರು ಮೊಬೈಲ್ ಬಳಸಿ ಸೇನಾ-ನಾಗರಿಕ ವಿಮಾನ ನಿಲ್ದಾಣದ ಚಿತ್ರಗಳನ್ನು ತೆಗೆದಿದ್ದರು. ವಿಮಾನದಲ್ಲಿದ್ದ ಸಹ ಪ್ರಯಾಣಿಕರೊಬ್ಬರು ತಕ್ಷಣವೇ ಅಧಿಕಾರಿಗಳ ಗಮನಕ್ಕೆ ಬಂದ ಬಳಿಕ ಪೊಲೀಸರಿಗೂ ಮಾಹಿತಿ ನೀಡಿದ್ದರು.