ಮೆಕ್ಸಿಕೊ ಸಿಟಿ: ಕ್ಲಾಡಿಯಾ ಶೈನ್‌ಬಾಮ್ ಅವರು ಮೆಕ್ಸಿಕೊ ದೇಶದ ಮೊದಲ ಮಹಿಳಾ ಅಧ್ಯಕ್ಷರಾಗಿ ಭಾನುವಾರ ಚುನಾಯಿತರಾದರು. ಅಪರಾಧ ಪ್ರಕರಣಗಳು ಮತ್ತು ಲಿಂಗ ಆಧಾರಿತ ಹಿಂಸಾಚಾರಕ್ಕೆ ಕುಖ್ಯಾತಿ ಪಡೆದಿರುವ ದೇಶದಲ್ಲಿ ಈ ಮೂಲಕ ಹೊಸ ಇತಿಹಾಸ ನಿರ್ಮಿಸಿದರು.
ಮೆಕ್ಸಿಕೊದ 200 ವರ್ಷಗಳ ಇತಿಹಾಸದಲ್ಲಿ ಮಹಿಳೆಯೊಬ್ಬರು ಇದುವರೆಗೆ ಅಧ್ಯಕ್ಷ ಸ್ಥಾನಕ್ಕೆ ಏರಿರಲಿಲ್ಲ.
ವಿಜ್ಞಾನಿಯೂ ಆಗಿರುವ 61 ವರ್ಷದ ಶೀನ್‌ಬಾಮ್ ಅವರು ಈ ಹಿಂದೆ ಮೆಕ್ಸಿಕೊ ನಗರದ ಮೇಯರ್ ಆಗಿ ಕಾರ್ಯನಿರ್ವಹಿಸಿದ್ದರು. 'ಈ ಐತಿಹಾಸಿಕ ಚುನಾವಣೆಯಲ್ಲಿ ನಮ್ಮ ಪಕ್ಷದ ಪರ ಮತ ಹಾಕಿರುವ ಮೆಕ್ಸಿಕೊದ ಲಕ್ಷಾಂತರ ಮಹಿಳೆಯರು ಮತ್ತು ಪುರುಷರಿಗೆ ನಾನು ಧನ್ಯವಾದ ಸಲ್ಲಿಸುತ್ತೇನೆ' ಎಂದು ಶೀನ್‌ಬಾಮ್ ಹೇಳಿದರು.
'ನಾನು ಮೆಕ್ಸಿಕೊದ ಮೊದಲ ಮಹಿಳಾ ಅಧ್ಯಕ್ಷೆ ಆಗಲಿದ್ದೇನೆ. ನಮ್ಮದು ಪ್ರಜಾಪ್ರಭುತ್ವ ದೇಶ ಎಂಬುದನ್ನು ಶಾಂತಿಯುತ ಚುನಾವಣೆ ಮೂಲಕ ತೋರಿಸಿಕೊಟ್ಟಿದ್ದೇವೆ' ಎಂದು ಪ್ರತಿಕ್ರಿಯಿಸಿದರು.
ಶೈನ್‌ಬಾಮ್ ಅವರು ಶೇ 58.3 ರಿಂದ ಶೇ 60.7ರಷ್ಟು ಮತಗಳನ್ನು ಪಡೆದಿದ್ದಾರೆ ಎಂದು ಮೆಕ್ಸಿಕೊ ರಾಷ್ಟ್ರೀಯ ಚುನಾವಣಾ ಸಂಸ್ಥೆಯ ಅಧ್ಯಕ್ಷರು ಪ್ರಕಟಿಸಿದರು. ಅವರ ಸಮೀಪದ ಪ್ರತಿಸ್ಪರ್ಧಿ ಸೋಚಿ ಗಾಲ್ವೆಜ್ ಶೇ 26.6 ರಿಂದ ಶೇ 28.6ರಷ್ಟು ಮತಗಳನ್ನು ಹಾಗೂ ಕಣದಲ್ಲಿದ್ದ ಇನ್ನೊಬ್ಬ ಸ್ಪರ್ಧಿ ಜಾರ್ಜ್ ಅಲ್ವಾರೆಜ್ ಮೇನೆಜ್ ಶೇ 9.9 ರಿಂದ ಶೇ 10.8 ರಷ್ಟು ಮತಗಳನ್ನು ತಮ್ಮದಾಗಿಸಿಕೊಂಡರು.
ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಶೈನ್‌ಬಾಮ್ ಅವರ ಬೆಂಬಲಿಗರು ಬೀದಿಗಿಳಿದು ಸಂಭ್ರಮಿಸಿದರು. ಆಡಳಿತಾರೂಢ ಪಕ್ಷದ ಬಾವುಟ ಹಿಡಿದು ನೃತ್ಯ ಮಾಡಿದರು.
ಶೈನ್‌ಬಾಮ್ ಅವರು ಅಕ್ಟೋಬರ್ 1 ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಮಹಿಳೆಯನ್ನು ಆಯ್ಕೆ ಮಾಡುವ ಮೂಲಕ ಮೆಕ್ಸಿಕೊ ದೇಶವು ಲ್ಯಾಟಿನ್ ಅಮೆರಿಕದ ಇತರ ದೇಶಗಳಾದ ಬ್ರೆಜಿಲ್, ಚಿಲಿ, ಕೋಸ್ಟರಿಕಾ, ಹಾಂಡುರಸ್, ನಿಕಾರಗುವಾ ಮತ್ತು ಪನಾಮಾ ಸಾಲಿಗೆ ಸೇರಿಕೊಂಡಿತು. ಈ ದೇಶಗಳಲ್ಲಿ ಮಹಿಳೆಯರು ಈಗಾಗಲೇ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದಾರೆ.