HEALTH TIPS

ಕುವೈತ್‌ ತೆರಳಲು ಕೇಂದ್ರದಿಂದ ಅನುಮತಿ ನಿರಾಕರಣೆ: ಕೇರಳ ಸಿಎಂ ಆರೋಪ

 ತಿರುವನಂತಪುರ: ಕುವೈತ್‌ನಲ್ಲಿ ಸಂಭವಿಸಿದ್ದ ಅಗ್ನಿ ಅವಘಡದಲ್ಲಿ ಕೇರಳದ 23 ಮಂದಿ ಸೇರಿದಂತೆ 45 ಮಂದಿ ಭಾರತೀಯರು ಮೃತಪಟ್ಟಿದ್ದರು.

ದುರಂತದ ಬೆನ್ನಲ್ಲೇ ಸಮನ್ವಯ ಸಾಧಿಸಲು ಕುವೈತ್‌ಗೆ ತೆರಳಲು ಯೋಜಿಸಿದ್ದ ಕೇರಳದ ಸಚಿವೆ ವೀಣಾ ಜಾರ್ಜ್ ಅವರಿಗೆ ಕೇಂದ್ರ ಸರ್ಕಾರ ಅನುಮತಿ ನಿರಾಕರಿಸಿತ್ತು ಎಂದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆರೋಪಿಸಿದ್ದಾರೆ.

ಆದರೆ ಕೇಂದ್ರ ಸರ್ಕಾರದ ನಿರ್ಧಾರವನ್ನು ಕೇರಳದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಹಾಗೂ ಕೇಂದ್ರ ಸಚಿವ ಸುರೇಶ್ ಗೋಪಿ ಸಮರ್ಥಿಸಿಕೊಂಡಿದ್ದಾರೆ.

'ಮೃತದೇಹಗಳನ್ನು ಇಂದು (ಶುಕ್ರವಾರ) ವಿಶೇಷ ವಿಮಾನದ ಮೂಲಕ ಕೊಚ್ಚಿಗೆ ತರಲಾಗಿದೆ. ಹಾಗಿರುವಾಗ ನಿನ್ನೆ ಅಲ್ಲಿಗೆ ಹೋಗಿ ಮತ್ತೆ ಇಂದು ಮರಳುವುದಾದರೆ ಅಲ್ಲಿ ಹೋಗಿ ಸಾಧಿಸುವುದಾದರೂ ಏನು? ಈಗಾಗಲೇ ಕೇಂದ್ರ ಸರ್ಕಾರದ ಸಚಿವರು ಕುವೈತ್‌ಗೆ ತೆರಳಿ ಸಮನ್ವಯ ಸಾಧಿಸಿದ್ದಾರೆ' ಎಂದು ಆರಿಫ್ ಮೊಹಮ್ಮದ್ ಖಾನ್ ಹೇಳಿದ್ದಾರೆ.

ಮತ್ತೊಂದೆಡೆ ಪ್ರತಿಕ್ರಿಯಿಸಿರುವ ಸುರೇಶ್ ಗೋಪಿ, ಈ ವಿಚಾರದಲ್ಲಿ ಅನಗತ್ಯ ವಿವಾದ ಉಂಟು ಮಾಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. 'ರಾಜತಾಂತ್ರಿಕ ವಿಷಯದಲ್ಲಿ ಸಮರ್ಥ ನಾಯಕರು ಅಲ್ಲಿದ್ದಾರೆ. ಗಾಯಗೊಂಡ ಭಾರತೀಯರಿಗೆ ಸಹಾಯ ಮಾಡುವುದು ಭಾರತ ಸರ್ಕಾರದ ಕರ್ತವ್ಯವಾಗಿದೆ. ಅದನ್ನು ಅವರು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ' ಎಂದು ಹೇಳಿದ್ದಾರೆ.

ಈ ಮೊದಲು ಕೊಚ್ಚಿಯಲ್ಲಿ ಹೇಳಿಕೆ ನೀಡಿದ್ದ ಕೇರಳ ಸಿಎಂ ಪಿಣರಾಯಿ ವಿಜಯನ್, 'ಕೇರಳದ ಸಚಿವೆ ಇಲ್ಲಿದ್ದಾರೆ. ಅವರು ಅಲ್ಲಿಗೆ (ಕುವೈತ್) ತೆರಳಬೇಕಿತ್ತು. ಆದರೆ ರಾಜಕೀಯ ಅನುಮತಿ ದೊರಕಿರಲಿಲ್ಲ. ಈ ಸಂದರ್ಭದಲ್ಲಿ ಈ ವಿಷಯದ ಕುರಿತು ಹೆಚ್ಚು ಮಾತನಾಡಲು ಇಷ್ಟಪಡುವುದಿಲ್ಲ' ಎಂದು ಹೇಳಿದ್ದರು.

ಕೇರಳದ ಸಚಿವೆಗೆ ಕುವೈತ್‌ಗೆ ತೆರಳಲು ಅನುಮತಿ ನಿರಾಕರಿಸಿರುವುದು 'ದುರದೃಷ್ಟಕರ' ಎಂದು ಕೇರಳದ ವಿರೋಧ ಪಕ್ಷದ ನಾಯಕ, ಕಾಂಗ್ರೆಸ್‌ನ ವಿ.ಡಿ. ಸತೀಶನ್ ಪ್ರತಿಕ್ರಿಯಿಸಿದ್ದಾರೆ.

ಕುವೈತ್‌ನ ವಸತಿ ಕಟ್ಟಡದಲ್ಲಿ ಸಂಭವಿಸಿದ್ದ ಅಗ್ನಿ ಅವಘಡದಲ್ಲಿ ಒಟ್ಟು 49 ಮಂದಿ ಮೃತಪಟ್ಟಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries