HEALTH TIPS

ನಳಂದ ಕ್ಯಾಂಪಸ್‌ ಉದ್ಘಾಟನೆ : ಸಂಶೋಧನಾಧಾರಿತ ಶಿಕ್ಷಣ ವ್ಯವಸ್ಥೆಗೆ ಯೋಜನೆ: ಮೋದಿ

         ರಾಜಗೀರ್: 'ಆಧುನಿಕ ಹಾಗೂ ಸಂಶೋಧನಾಧಾರಿತ ಉನ್ನತ ಶಿಕ್ಷಣ ವ್ಯವಸ್ಥೆ ಜಾರಿ ಮೂಲಕ ಭಾರತವು ಜಗತ್ತಿನ ಅತ್ಯಂತ ಪ್ರಮುಖ ಜ್ಞಾನ ಕೇಂದ್ರವನ್ನಾಗಿ ರೂಪಿಸುವ ಯೋಜನೆಯನ್ನು ಸರ್ಕಾರ ಹೊಂದಿದೆ' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

          ಬಿಹಾರದ ರಾಜಗೀರ್‌ನಲ್ಲಿ ನಳಂದ ವಿಶ್ವವಿದ್ಯಾಲಯದ ನೂತನ ಕ್ಯಾಂಪಸ್‌ ಉದ್ಘಾಟನಾ ಸಮಾರಂಭದಲ್ಲಿ ಅವರು ಬುಧವಾರ ಮಾತನಾಡಿದರು.

         'ಉನ್ನತ ಶಿಕ್ಷಣದಲ್ಲಿ ಇಡೀ ಜಗತ್ತಿಗೇ ಈ ವಿಶ್ವವಿದ್ಯಾಲಯವು ಜ್ಞಾನದ ಕೇಂದ್ರವಾಗಿತ್ತು. ಆದರೆ 12ನೇ ಶತಮಾನದಲ್ಲಿ ದಾಳಿಕೋರರಿಂದ ಹಾಳಾಯಿತು. ಆದರೆ ಬೆಂಕಿಯಿಂದ ಜ್ಞಾನವನ್ನು ನಾಶಪಡಿಸಲು ಎಂದಿಗೂ ಸಾಧ್ಯವಾಗದು. ಹೀಗಾಗಿ 21ನೇ ಶತಮಾನದಲ್ಲಿ ಭಾರತ ತನ್ನ ಜ್ಞಾನವನ್ನು ಜಗತ್ತಿಗೆ ಹಂಚಬೇಕಿದೆ. 21ನೇ ಶತಮಾನ ಏಷ್ಯಾದ್ದಾಗಿದೆ. 2047ರ ಹೊತ್ತಿಗೆ ದೇಶ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿದೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.

            'ಆರ್ಥಿಕ ಹಾಗೂ ಸಾಂಸ್ಕೃತಿಕ ನಾಯಕರು ಶಿಕ್ಷಣ ಕ್ಷೇತ್ರದಲ್ಲಿ ಕೈಗೊಂಡ ಸಾಧನೆಗಳೇ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿಸಿದೆ ಎಂಬುದಕ್ಕೆ ಸಾಕ್ಷಿ. ಪ್ರಾಚೀನ ಕಾಲದಲ್ಲಿ ಭಾರತದಲ್ಲಿ ನಳಂದ ಹಾಗೂ ವಿಕ್ರಮಶಿಲೆಯಂತ ಉನ್ನತ ಶಿಕ್ಷಣ ಸಂಸ್ಥೆಗಳಿದ್ದವು ಎಂಬುದೇ ನಮ್ಮ ಹೆಮ್ಮೆ. ಇನ್ನು ಕೆಲವೇ ದಿನಗಳಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಇದ್ದು, ಜಗತ್ತಿಗೆ ಸಂಸ್ಕೃತಿಯ ರಾಯಭಾರಿಯಾಗಿ ತನ್ನ ಕೆಲಸವನ್ನು ಭಾರತ ಮಾಡಲಿದೆ' ಎಂದು ಮೋದಿ ಹೇಳಿದ್ದಾರೆ.

             'ದೇಶವನ್ನು ಜಗತ್ತಿನ ಉನ್ನತ ಜ್ಞಾನದ ಕೇಂದ್ರವನ್ನಾಗಿ ಮರುಸ್ಥಾಪಿಸುವುದೇ ನನ್ನ ಕಾರ್ಯಯೋಜನೆ. ಇದಕ್ಕಾಗಿ ಬಾಲ್ಯದಿಂದಲೇ ಮಕ್ಕಳಲ್ಲಿ ನಾವೀನ್ಯತೆಯನ್ನು ಜಾಗೃತಿ ಮೂಡಿಸುವ ಕೆಲಸ ಮಾಡಬೇಕಾಗಿದೆ. ಇದಕ್ಕಾಗಿಯೇ ಇರುವ 'ಅಟಲ್ ಟಿಂಕರಿಂಗ್‌' ಪ್ರಯೋಗಾಲಯದ ಸಂಪರ್ಕಕ್ಕೆ ಒಂದು ಕೋಟಿಗೂ ಹೆಚ್ಚು ಮಕ್ಕಳು ಬರುತ್ತಾರೆ. ಚಂದ್ರಯಾನ ಹಾಗೂ ಗಗನಯಾನ ಯೋಜನೆಗಳು ಮಕ್ಕಳಲ್ಲಿನ ವೈಜ್ಞಾನಿಕ ಆಸಕ್ತಿಯನ್ನು ಉದ್ದೀಪಿಸುತ್ತಿವೆ' ಎಂದು ಹೇಳಿದರು.

           'ಹತ್ತು ವರ್ಷಗಳ ಹಿಂದೆ ಕೇವಲ 100 ಸ್ಟಾರ್ಟ್‌ಅಪ್‌ಗಳು ಭಾರತದಲ್ಲಿ ಇದ್ದವು. ಈ ಸಂಖ್ಯೆ ಈಗ 1.3 ಲಕ್ಷಕ್ಕೆ ಏರಿಕೆಯಾಗಿದೆ. ಇದರೊಂದಿಗೆ ಪೇಟೆಂಟ್‌ ಹಕ್ಕು ಪಡೆಯುತ್ತಿರುವ ಮತ್ತು ಸಂಶೋಧನಾ ಲೇಖನಗಳನ್ನು ಪ್ರಕಟಿಸುತ್ತಿರುವ ಭಾರತೀಯರ ಸಂಖ್ಯೆ ವೃದ್ಧಿಸಿದೆ. ಸಂಶೋಧನೆ ಮತ್ತು ನಾವೀನ್ಯತೆಗೆ ಕೇಂದ್ರ ಸರ್ಕಾರವು ₹1ಲಕ್ಷ ಕೋಟಿ ಅನುದಾನವನ್ನು ಮೀಸಲಿಟ್ಟಿದೆ' ಎಂದು ಈ ಸಂದರ್ಭದಲ್ಲಿ ಪ್ರಧಾನಿ ಹೇಳಿದರು.

            'ಜಗತ್ತಿನ ಪರಿಪೂರ್ಣ ಜ್ಞಾನ ಹಾಗೂ ಕೌಶಲ ವ್ಯವಸ್ಥೆಯ ಕೇಂದ್ರವನ್ನಾಗಿ ಭಾರತವನ್ನು ಅಭಿವೃದ್ಧಿಪಡಿಸುವುದು ನಮ್ಮ ಮುಂದಿನ ಯೋಜನೆ. ಇದರೊಂದಿಗೆ ಉನ್ನತ ಶಿಕ್ಷಣದಲ್ಲಿ ಅತ್ಯಾಧುನಿಕ ಸಂಶೋಧನಾ ಕೌಶಲಗಳನ್ನು ಅಳವಡಿಸಲಾಗುತ್ತಿದೆ. ಈ ನಮ್ಮ ಪ್ರಯತ್ನ ನಮಗೆ ಆರಂಭದಲ್ಲೇ ಫಲಿತಾಂಶವನ್ನು ತೋರಿಸುತ್ತಿದೆ. ನಮ್ಮ ದೇಶದ ವಿಶ್ವವಿದ್ಯಾಲಯಗಳ ರ‍್ಯಾಂಕಿಂಗ್ ಜಾಗತಿಕ ಮಟ್ಟದಲ್ಲೇ ಉತ್ತಮವಾಗುತ್ತಿದೆ. ದಶಕದ ಹಿಂದೆ ಕೇವಲ ಒಂಬತ್ತು ವಿಶ್ವವಿದ್ಯಾಲಯಗಳಿಗೆ ಮಾತ್ರ ಕ್ಯೂಎಸ್ ರ‍್ಯಾಂಕಿಂಗ್ ಇತ್ತು. ಈಗ ಈ ಸಂಖ್ಯೆ 46ಕ್ಕೆ ಹೆಚ್ಚಳವಾಗಿದೆ' ಎಂದು ಮೋದಿ ಹೇಳಿದರು.

              'ಕಳೆದ ಹತ್ತು ವರ್ಷಗಳಲ್ಲಿ ವಾರಕ್ಕೊಂದು ವಿಶ್ವವಿದ್ಯಾಲಯವನ್ನು ಸರ್ಕಾರ ಸ್ಥಾಪಿಸಿದೆ. ಇದರಂತೆಯೇ ಪ್ರತಿ ಹತ್ತು ದಿನಗಳಿಗೆ ಒಂದರಂತೆ ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ)ಗಳನ್ನು ಸ್ಥಾಪಿಸಲಾಗಿದೆ. ಪ್ರತಿ ಎರಡು ದಿನಗಳಿಗೆ ಒಂದು ಅಟಲ್ ಟಿಂಕರಿಂಗ್, ಪ್ರತಿ ದಿನ ಎರಡು ಕಾಲೇಜುಗಳು, 23 ಐಐಟಿಗಳು ಸ್ಥಾಪನೆಗೊಂಡಿವೆ. ಐಐಎಂಗಳ ಸಂಖ್ಯೆ 21ಕ್ಕೆ ಹೆಚ್ಚಿಸಲಾಗಿದೆ. ಏಮ್ಸ್‌ ಸಂಖ್ಯೆ 22ಕ್ಕೆ ಹಾಗೂ ವೈದ್ಯಕೀಯ ಕಾಲೇಜುಗಳ ಸಂಖ್ಯೆ ದ್ವಿಗುಣಗೊಳಿಸಲಾಗಿದೆ' ಎಂದು ನಮ್ಮ ಕಳೆದ ಹತ್ತು ವರ್ಷಗಳ ಸಾಧನೆಯ ಪಟ್ಟಿಯನ್ನು ಹಂಚಿಕೊಂಡರು.

          'ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ಆಗಿದೆ. ಆ ಮೂಲಕ ಯುವ ಸಮುದಾಯದ ಕನಸುಗಳಿಗೆ ರೆಕ್ಕೆ ನೀಡಲಾಗಿದೆ. ನಮ್ಮ ವಿಶ್ವವಿದ್ಯಾಲಯಗಳು ಜಗತ್ತಿನ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿವೆ. ದೇಶದ ಪ್ರಮುಖ ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್‌ಗಳಲ್ಲಿ ಅಂತರರಾಷ್ಟ್ರೀಯ ಮಟ್ಟದ ಸಂಸ್ಥೆಗಳು ತಮ್ಮ ಕೇಂದ್ರಗಳನ್ನು ತೆರೆಯುವ ಮಟ್ಟಿಗೆ ಭಾರತದ ಶಿಕ್ಷಣ ವ್ಯವಸ್ಥೆ ಬೆಳೆದಿದೆ' ಎಂದರು.

              'ಇಂದು ಇಡೀ ಜಗತ್ತೇ ಭಾರತದ ಯುವಶಕ್ತಿಯತ್ತ ನಿರೀಕ್ಷೆಯ ಕಣ್ಣುಗಳನ್ನಿಟ್ಟಿದೆ. ಪ್ರಜಾಪ್ರಭುತ್ವದ ಬೇರು ಹಾಗೂ ಬುದ್ಧನ ನಾಡಿನೊಂದಿಗೆ ಹೆಜ್ಜೆ ಹಾಕಲು ಜಗತ್ತು ಇಂದು ಹಾತೊರೆಯುತ್ತಿದೆ. ದೇಶದ ಭವಿಷ್ಯದ ತಲೆಮಾರು ಜಗತ್ತನ್ನು ಆಳಲಿದೆ. ಆ ಮೂಲಕ ಜ್ಞಾನ ಹಾಗೂ ಶಿಕ್ಷಣದಲ್ಲಿ ಭಾರತವು ದೇಶದ ಪ್ರಮುಖ ಕೇಂದ್ರವಾಗಲಿದೆ' ಎಂದು ಮೋದಿ ಹೇಳಿದರು.

ಇದೇ ಸಂದರ್ಭದಲ್ಲಿ ನಳಂದ ಮಹಾವಿಹಾರದಲ್ಲಿ ಮೋದಿ ಕೆಲ ಸಮಯ ಕಳೆದರು. ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ 10 ದಿನಗಳಲ್ಲೇ ಇಂಥದ್ದೊಂದು ಅವಕಾಶ ಸಿಕ್ಕಿದ್ದಕ್ಕೆ ಧನ್ಯತೆ ಅರ್ಪಿಸಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries