ಕಾಸರಗೋಡು: ಮಹಿಳಾ ದೌರ್ಜನ್ಯ, ವರದಕ್ಷಿಣೆ ಕಿರುಕುಳದ ವಿರುದ್ಧ ಕುಟುಂಬಶ್ರೀ ವತಿಯಿಂದ ಅಭಿಯಾನವನ್ನು ಕೈಗೆತ್ತಿಕೊಳ್ಳುವಂತೆ ವಿಧಾನಸಭಾಧ್ಯಕ್ಷ ಎ.ಎನ್. ಶಂಸೀರ್ ತಿಳಿಸಿದ್ದಾರೆ. ಅವರು ಕಾಸರಗೋಡು ಜಿಲ್ಲೆಯ ಪಿಲಿಕೋಡು ಕಾಲಿಕಡವ್ ಮೈದಾನದಲ್ಲಿ ಕುಟುಂಬಶ್ರೀ ವತಿಯಿಂದ ಆಯೋಜಿಸಲಾದ ರಾಜ್ಯಮಟ್ಟದ'ಆರಂಗ್-ಸರ್ಗೋತ್ಸವ ೨೦೨೪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕುಟುಂಬಶ್ರೀ ಏಷ್ಯಾದ ಅತಿದೊಡ್ಡ ಮಹಿಳಾ ಸಂಸ್ಥೆಯಾಗಿದ್ದು, ಮಹಿಳಾ ಸಬಲೀಕರಣಕ್ಕಾಗಿ ರೂಪುಗೊಂಡಿರುವ ಈ ಸಂಸ್ಥೆಯು ಲಕ್ಷಾಂತರ ಕುಟುಂಬದ ಮಹಿಳೆಯರ ಬದುಕನ್ನು ಧನಾತ್ಮಕವಾಗಿ ಬದಲಾಯಿಸಿದೆ. ಮತಗಟ್ಟೆ ಅಧಿಕಾರಿಗಳಿಗೆ ಚುನಾವಣೆ ಸಂದರ್ಭ ಊಟ ಒದಗಿಸುವುದರಿಂದ ತೊಡಗಿ, ಆಧುನಿಕ ತಂತ್ರಜ್ಞಾನ ಕ್ಷೇತ್ರ ಸೇರಿದಂತೆ ಕುಟುಂಬಶ್ರೀ ಮುಟ್ಟದ ಕ್ಷೇತ್ರವೇ ಇಲ್ಲದಂತಾಗಿದೆ. ಕೇರಳದಲ್ಲಿ ಕುಟುಂಬಶ್ರೀ ಜೀವನದ ಅವಿಭಾಜ್ಯ ಅಂಗವಾಗಿ ಬದಲಾಗಿದೆ ಎಂದು ತಿಳಿಸಿದರು.
ಶಾಸಕ ಎಂ. ರಾಜಗೋಪಾಲ ಶಾಸಕ ಅಧ್ಯಕ್ಷತೆ ವಹಿಸಿದ್ದರು. ಕುಟುಂಬಶ್ರೀ ಕಾರ್ಯನಿರ್ವಾಹಕ ನಿರ್ದೇಶಕ ಜಾಫರ್ ಮಲಿಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಸಕ ಇ. ಚಂದ್ರಶೇಖರನ್ ಲಾಂಛನ ಬಿಡುಗಡೆಗೊಳಿಸಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ. ಬೇಬಿ ಬಾಲಕೃಷ್ಣನ್, ಕುಟುಂಬಶ್ರೀ ಆಡಳಿತ ಮಂಡಳಿ ಸದಸ್ಯೆ, ಕಣ್ಣೂರು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪಿ.ಪಿ.ದಿವ್ಯಾ, ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾಞಂಗಾಡು ನಗರಸಭಾ ಅಧ್ಯಕ್ಷೆ ಕೆ.ವಿ.ಸುಜಾತ, ನೀಲೇಶ್ವರ ನಗರಸಭಾ ಅಧ್ಯಕ್ಷೆ ಟಿ.ವಿ.ಶಾಂತಾ, ಕಾಞಂಗಾಡು ಬ್ಲಾಕ್ ಪಂಚಾಯತ್ ಅಧ್ಯಕ್ಷ ಕೆ. ಮಣಿಕಂಠ ಮೊದಲಾದವರು ಉಪಸ್ಥೀತರಿದ್ದರು.
ಕುಟುಂಬಶ್ರೀ ಜಿಲ್ಲಾ ಮಿಷನ್ ಸಂಯೋಜಕ ಟಿ.ಟಿ.ಸುರೇಂದ್ರನ್ ಸ್ವಾಗತಿಸಿದರು. ಕಾರ್ಯಕ್ರಮ ಸಮಿತಿ ಸಂಚಾಲಕ ಡಿ. ಹರಿದಾಸ್ ವಂದಿಸಿದರು. ಜೂನ್ ೯ರಂದು ಸರ್ಗೋತ್ಸವ ಸಮಾರೋಪಗೊಳ್ಳಲಿದೆ.