ಚೆನ್ನೈ : ಕಲ್ಲಕುರಿಚ್ಚಿಯಲ್ಲಿ ನಡೆದ ವಿಷಪೂರಿತ ಮದ್ಯಸೇವನೆ ಪ್ರಕರಣವು ಸತತ ಎರಡನೇ ದಿನವಾದ ಶನಿವಾರ ತಮಿಳುನಾಡು ಅಧಿವೇಶನದಲ್ಲಿ ಪ್ರತಿಧ್ವನಿಸಿತು. ಪ್ರಮುಖ ಪ್ರತಿಪಕ್ಷ ಎಐಎಡಿಎಂಕೆ, ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿ ಸದನ ಬಹಿಷ್ಕರಿಸಿ ಹೊರನಡೆಯಿತು.

ಅತ್ಯಂತ ನೋವಿನ ವಿಚಾರದಲ್ಲಿ ಡಿಎಂಕೆ ಪಕ್ಷವು ರಾಜಕೀಯ ಮಾಡುತ್ತಿದ್ದು, ತನಿಖೆ ಪಾರದರ್ಶಕವಾಗಿ ನಡೆಯುತ್ತಿದೆ. ಸಿಬಿಐ ತನಿಖೆಗೆ ಒಪ್ಪಿಸಲು ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರ ಬೇಡಿಕೆ ನಿರಾಕರಿಸಿತು.
'ರಾಜ್ಯ ಸರ್ಕಾರ ಪಾರದರ್ಶಕವಾಗಿದೆ. ನಾವು ಯಾವುದೇ ವಿಚಾರವನ್ನು ಮಚ್ಚಿಟ್ಟಿಲ್ಲ. ಸಿಬಿಐ ತನಿಖೆ ನಡೆಸುವ ಅಗತ್ಯವಿಲ್ಲ' ಎಂದು ಕಾನೂನು ಸಚಿವ ಎಸ್. ರಘುಪತಿ ಸದನದಲ್ಲಿ ತಿಳಿಸಿದರು.
ಸಾವಿನ ಸಂಖ್ಯೆ 53ಕ್ಕೆ ಏರಿಕೆ: ಕಲ್ಲಕುರಿಚ್ಚಿಯಲ್ಲಿ ವಿಷಯುಕ್ತ ಮದ್ಯಸೇವನೆ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 53ಕ್ಕೆ ಏರಿಕೆಯಾಗಿದೆ. 140 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಸ್ಥಳೀಯಾಡಳಿತವು ತಿಳಿಸಿದೆ.
'ಜಿಲ್ಲೆಯಲ್ಲಿ ಮಂಗಳವಾರ ವಿಷಪೂರಿತ ಮದ್ಯಸೇವಿಸಿದ್ದ 193 ಮಂದಿ ಪೈಕಿ 140 ಮಂದಿಯನ್ನು ವಿವಿಧ ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ದಾಖಲಾದವರಿಗೆ ಯಾವುದೇ ಅಪಾಯವಿಲ್ಲ' ಎಂದು ಕಲ್ಲಕುರಿಚ್ಚಿ ಜಿಲ್ಲಾಧಿಕಾರಿ ಎಂ.ಎಸ್.ಪ್ರಶಾಂತ್ ತಿಳಿಸಿದರು.
'ಇದುವರೆಗೂ 53 ಮಂದಿ ಮೃತಪಟ್ಟಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಮಂದಿಯನ್ನು ಬಂಧಿಸಲಾಗಿದೆ' ಎಂದು ಆಸ್ಪತ್ರೆಯಲ್ಲಿ ಸಂತ್ರಸ್ತರನ್ನು ಭೇಟಿಯಾಗಿ ತಿಳಿಸಿದರು.