ಅಬುಧಾಬಿ: ತಿರುವನಂತಪುರಂನಲ್ಲಿ ಆರಂಭಗೊಂಡಿರುವ ಲೋಕ ಕೇರಳ ಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲವೆಂದು ನೋರ್ಕಾ ಉಪಾಧ್ಯಕ್ಷ ಮತ್ತು ಲುಲು ಗ್ರೂಪ್ ಅಧ್ಯಕ್ಷ ಎಂಎ ಯೂಸಫಲಿ ತಿಳಿಸಿದ್ದಾರೆ. ಕುವೈತ್‍ನಲ್ಲಿ ಅಗ್ನಿ ದುರಂತದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದಿರುವರು.
ಅನಿವಾಸಿಗರಿಗೆ ದೊಡ್ಡ ದುರಂತ ಕುವೈತ್‍ನಲ್ಲಿ ಸಂಭವಿಸಿದೆ. ಮೃತರಲ್ಲಿ 24 ಮಂದಿ ಕೇರಳೀಯರು ಸೇರಿದಂತೆ 46 ಮಂದಿ ಭಾರತೀಯರು ಸೇರಿದ್ದಾರೆ. ಗಾಯಗೊಂಡವರು ಮತ್ತು ಆಸ್ಪತ್ರೆಗೆ ದಾಖಲಾಗಿರುವವರಲ್ಲಿ ಹೆಚ್ಚಿನವರು ಭಾರತೀಯರು. ಇಂತಹ ಸಂದರ್ಭದಲ್ಲಿ ಅವರಿಗೆ ಅಗತ್ಯವಿರುವ ಸಹಾಯ ಮತ್ತು ಬೆಂಬಲವನ್ನು ಖಾತ್ರಿಪಡಿಸುವ ಭಾಗವಾಗಿ ಕೇರಳ ಪ್ರವಾಸವನ್ನು ರದ್ದುಗೊಳಿಸಲಾಗಿದೆ ಎಂದು ಲುಲು ಗ್ರೂಪ್ ಮಾಹಿತಿ ನೀಡಿದೆ. ಮೃತರ ಕುಟುಂಬಗಳಿಗೆ ನೊರ್ಕಾ ಮೂಲಕ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಲುಲು ಗ್ರೂಪ್ ನಿನ್ನೆ ಘೋಷಿಸಿತ್ತು.
ಈ ಮಧ್ಯೆ ಲಕ್ಷಗಟ್ಟಲೆ ವ್ಯಯಿಸಿ ಲೋಕ ಕೇರಳ ಸಭೆ ನಡೆಸುವ ಬದಲು ದುರಂತದಲ್ಲಿ ಸಂತ್ರಸ್ತರ ಕುಟುಂಬಗಳಿಗೆ ಹಣ ಹಸ್ತಾಂತರಿಸಲು ಎಲ್‍ಡಿಎಫ್ ಸರ್ಕಾರ ಸಿದ್ಧವಾಗಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಆಗ್ರಹಿಸಿದ್ದಾರೆ.
ಕೇರಳೀಯರು ಸೇರಿದಂತೆ ಹಲವು ಮಂದಿ ಪ್ರಾಣ ಕಳೆದುಕೊಂಡಿರುವ ಪರಿಸ್ಥಿತಿಯಲ್ಲಿ ಲೋಕ ಕೇರಳ ಸಭೆ ನಡೆಸದಂತೆ ವಿವಿಧ ಕಡೆಗಳಿಂದ ಒತ್ತಾಯ ಕೇಳಿ ಬಂದಿದ್ದರೂ ಸರ್ಕಾರ ಸಮಾರಂಭ ನಡೆಸಲು ನಿರ್ಧರಿಸಿದೆ. ವಿಧಾನಸಭೆ ಕಟ್ಟಡ ಆರ್. ಶಂಕರನಾರಾಯಣ ತಂಬಿ ಸಭಾಂಗಣದಲ್ಲಿ ಲೋಕ ಕೇರಳ ಸಭೆ ಪ್ರಸ್ತುತ ಪ್ರಗತಿಯಲ್ಲಿದೆ.