ಕುಂಬಳೆ: ಹಿರಿಯ ಸಾಹಿತಿ, ಶಿಕ್ಷಣತಜ್ಞ ವಿ.ಬಿ.ಕುಳಮರ್ವ ಹಾಗೂ ನಿವೃತ್ತ ಜಿಲ್ಲಾ ವಿದ್ಯಾಧಿಕಾರಿ ಲಲಿತಾಲಕ್ಷ್ಮೀ ದಂಪತಿಗಳು "ಸಾಧಕರಿಗೆ ನಮನ" ಎಂಬ ಶೀರ್ಷಿಕೆಯಲ್ಲಿ ಇದುವರೆಗೆ ಹಲವು ಜನ ಗುರುಹಿರಿಯರನ್ನು ಹಾಗೂ ವಿಶೇಷ ಪ್ರತಿಭಾವಂತರನ್ನು ಗುರುತಿಸಿ ಸನ್ಮಾನಿಸಿ ಅಭಿನಂದಿಸುವ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದ್ದಾರೆ. ಮುಂದುವರಿಯುತ್ತಾ ಮಂಗಳೂರಿನ ಅಶೋಕನಗರದ ಶ್ರೀನಿವಾಸ ರಾಯರ ಮನೆಗೆ ತೆರಳಿ ತೊಂಭತ್ತರ ಹರಯದ ಶ್ರೀನಿವಾಸ ರಾವ್ ಹಾಗೂ ಸಾವಿತ್ರಿ ದಂಪತಿಗಳನ್ನು ವಿಶೇಷವಾಗಿ ಸನ್ಮಾನಿಸಿ ಅಭಿನಂದಿಸುವುದರೊಂದಿಗೆ ಹಿರಿಯರ ಆಶೀರ್ವಾದಗಳನ್ನು ಪಡೆದುಕೊಂಡರು.
ಶ್ರೀನಿವಾಸ ರಾವ್ ಹಾಗೂ ಸಾವಿತ್ರಿ ದಂಪತಿಗಳು ಕಾಸರಗೋಡು ಹಾಗೂ ಉಡುಪಿ ಜಿಲ್ಲಾ ಸಹಿತವಾದ ದಕ್ಷಿಣಕನ್ನಡ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮದ ಸ್ಥಾಪಕ ಕಾರ್ಯದರ್ಶಿಗಳಾಗಿ ಮೂರು ದಶಕಗಳಿಗೂ ಹೆಚ್ಚು ಕಾಲ ಮುನ್ನಡೆಸುತ್ತಾ ಬಂದವರು. ಮಕ್ಕಳಲ್ಲಿ ಹುದುಗಿರುವ ಸಾಹಿತ್ಯ ಪ್ರತಿಭೆಯನ್ನು ಗುರುತಿಸುವ ನಿಟ್ಟಿನಲ್ಲಿ ಸಾವಿರಾರು ಕಮ್ಮಟಗಳನ್ನು, ಸಮ್ಮೇಳನಗಳನ್ನು ನಡೆಸುತ್ತಾ ಬಂದವರು. ತಮ್ಮ ಜೀವಮಾನವನ್ನೇ ಸಾಹಿತ್ಯ ಮತ್ತು ಸಮಾಜಕ್ಕೆ ಮೀಸಲಾಗಿರಿಸಿದ ಮಹಾನು`Áವರು.ಇಬ್ಬರೂ ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕರು. ಈ ಸಂದರ್ಭದಲ್ಲಿ ಅವರು ತಮ್ಮ ಸಾಧನಾ ಪಥದ ಅನುಭವಗಳೊಂದಿಗೆ ಹಲವಾರು ಹಿರಿಯ ಸಾಧಕರ ಒಟನಾಟದ ದಿವ್ಯಾನುಭವಗಳನ್ನೂ ಹಂಚಿಕೊಂಡರು. ಕೆನರಾ ಹೈಸ್ಕೂಲಿನ ಹಿರಿಯ ಶಿಕ್ಷಕಿ ಕವಯತ್ರಿ ಲಕ್ಷ್ಮೀ ಭಟ್ ಅವರೂ ತಮ್ಮ ಅಮೂಲ್ಯ ಪುಸ್ತಕಗಳನ್ನು ಹಿರಿಯರಿಗೆ ಸಮರ್ಪಿಸಿ ಶುಭ ಹಾರೈಸಿದರು. ವಿ.ಬಿ.ಕುಳಮರ್ವ ಸ್ವಾಗತಿಸಿ ಲಲಿತಾಲಕ್ಷ್ಮೀ ಕುಳಮರ್ವ ವಂದಿಸಿದರು.