HEALTH TIPS

ರಸಗೊಬ್ಬರ ಸಬ್ಸಿಡಿ ಹೆಚ್ಚಿಸಿ: ರೈತ ಸಂಘಟನೆಗಳ ಒತ್ತಾಯ

        ವದೆಹಲಿ: ಹವಾಮಾನ ವೈಪರೀತ್ಯದಿಂದ ಕೃಷಿ ವಲಯವು ಸಂಕಷ್ಟದ ಸುಳಿಗೆ ಸಿಲುಕಿದೆ. ಹಾಗಾಗಿ, ರಸಗೊಬ್ಬರಗಳಿಗೆ ನೀಡುವ ಸಹಾಯಧನವನ್ನು ಹೆಚ್ಚಿಸಬೇಕು. ಕೃಷಿ ಸಂಶೋಧನೆ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ಚಟುವಟಿಕೆಗಳಿಗೆ ಬಜೆಟ್‌ನಲ್ಲಿ ಹೆಚ್ಚಿನ ಅನುದಾನವನ್ನು ಮೀಸಲಿಡಬೇಕಿದೆ ಎಂದು ರೈತ ಸಂಘಟನೆಗಳು ಮತ್ತು ಕೃಷಿ ತಜ್ಞರು ಒಕ್ಕೊರಲ ಬೇಡಿಕೆ ಮಂಡಿಸಿದರು.

            ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಎರಡೂವರೆ ಗಂಟೆ ಕಾಲ ನಡೆದ ಬಜೆಟ್‌ ಪೂರ್ವ ಸಮಾಲೋಚನಾ ಸಭೆಯಲ್ಲಿ ಕೃಷಿ ವಲಯದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದರು.

          ಸದ್ಯ ಭಾರತೀಯ ಕೃಷಿ ಸಂಶೋಧನಾ ಮಂಡಳಿಗೆ (ಐಸಿಎಆರ್‌) ₹9,500 ಕೋಟಿ ಅನುದಾನ ಮೀಸಲಿಡಲಾಗಿದೆ. ಈ ಮೊತ್ತವನ್ನು ₹20 ಸಾವಿರ ಕೋಟಿಗೆ ಹೆಚ್ಚಿಸಬೇಕು. ಇದರಿಂದ ಕೃಷಿ ಸಂಶೋಧನೆ ಮತ್ತು ಅಭಿವೃದ್ಧಿಗೆ ನೆರವಾಗಲಿದೆ ಎಂದು ಸಲಹೆ ಮುಂದಿಟ್ಟರು.

               ಭಾರತೀಯ ಆಹಾರ ಮತ್ತು ಕೃಷಿ ಮಂಡಳಿ (ಐಸಿಎಫ್‌ಎ) ಅಧ್ಯಕ್ಷ ಎಂ.ಜೆ. ಖಾನ್‌ ಮಾತನಾಡಿ, 'ಕೃಷಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಅನುದಾನ ಹೆಚ್ಚಿಸಿದರೆ ರೈತರ ಆದಾಯದಲ್ಲೂ ಏರಿಕೆಯಾಗಲಿದೆ' ಎಂದು ಹೇಳಿದರು.

               ಕೃಷಿ ಸಂಬಂಧಿತ ಸಹಾಯಧನವನ್ನು ಫಲಾನುಭವಿಗಳ ಬ್ಯಾಂಕ್‌ ಖಾತೆಗಳಿಗೆ ನೇರವಾಗಿ ವರ್ಗಾವಣೆ ಮಾಡಬೇಕು. ಯೂರಿಯಾದ ಚಿಲ್ಲರೆ ದರ ಏರಿಕೆಯಾಗುತ್ತಿದೆ. ಹಾಗಾಗಿ, ಜೈವಿಕ ರಸಗೊಬ್ಬರ ಮತ್ತು ಎಲೆಗಳ ಪೋಷಣೆಗೆ ನೀಡುವ ರಸಗೊಬ್ಬರಕ್ಕೂ ಸಹಾಯಧನ ಸೌಲಭ್ಯ ಕಲ್ಪಿಸಿ, ಇವುಗಳ ಬಳಕೆಗೆ ಉತ್ತೇಜನ ನೀಡಬೇಕು ಎಂದು ಕೃಷಿ ತಜ್ಞರು ಕೋರಿದರು.

            ಭಾರತ್‌ ಕೃಷಿಕ ಸಮಾಜದ ಅಧ್ಯಕ್ಷ ಅಜಯ್ ವೀರ್ ಜಖರ್, 'ಕೃಷಿ ಶಿಕ್ಷಣ ಮತ್ತು ಸಂಶೋಧನೆಗೆ ಪ್ರತ್ಯೇಕವಾಗಿ ಅನುದಾನ ಮೀಸಲಿಡಬೇಕು' ಎಂದು ಮನವಿ ಮಾಡಿದರು.

ಕೃಷಿ ಸಂಶೋಧನೆಗೆ ಮಾಡುವ ಹೂಡಿಕೆಯು ಇತರೆ ವಲಯದಲ್ಲಿನ ಹೂಡಿಕೆಗಿಂತ 10 ಪಟ್ಟು ಆದಾಯ ತರುತ್ತದೆ. ಆದರೆ, ಹಣದುಬ್ಬರದ ಪರಿಣಾಮ ಕಳೆದ ಎರಡು ದಶಕಗಳಿಂದ ಈ ವಲಯಕ್ಕೆ ಮೀಸಲಿಡುವ ಅನುದಾನದಲ್ಲಿ ಕಡಿಮೆಯಾಗಿದೆ ಎಂದರು.

ಕೃಷಿ ವೆಚ್ಚ ಮತ್ತು ಬೆಲೆ ಆಯೋಗದ (ಸಿಎಸಿಪಿ) ಅಧ್ಯಕ್ಷ ಅಶೋಕ್‌ ಗುಲಾಟಿ ಹಾಜರಿದ್ದರು.

ಎಂಎಸ್‌ಪಿ ಸಮಿತಿ ವಿಸರ್ಜನೆಗೆ ಒತ್ತಾಯ

            ಕೃಷಿ ಹುಟ್ಟುವಳಿಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನಿಗದಿಪಡಿಸಲು ರಚಿಸಿರುವ ಸಮಿತಿಯನ್ನು ವಿಸರ್ಜಿಸಿ ಹೊಸ ಕೃಷಿ ನೀತಿಯನ್ನು ಜಾರಿಗೊಳಿಸಬೇಕು ಎಂದು ರೈತ ಸಂಘಟನೆಯ ಪ್ರತಿನಿಧಿಗಳು ಒತ್ತಾಯಿಸಿದರು.‌ ಕೇಂದ್ರ ಸರ್ಕಾರ ಪ್ರಾಯೋಜಿತ ಯೋಜನೆಗಳಿಗೆ ಮೀಸಲಿಡುವ ಹಣದ ಅನುಪಾತವನ್ನು ಪರಿಷ್ಕರಿಸಬೇಕಿದೆ. ಸದ್ಯ 60:40ರ ಅನುಪಾತದಲ್ಲಿ ಅನುದಾನ ನೀಡಲಾಗುತ್ತಿದ್ದು ಇದನ್ನು 90:10 ಅನುಪಾತ ಕಾಯ್ದುಕೊಳ್ಳಬೇಕು. ಮುಂದಿನ ಐದು ವರ್ಷಗಳ ಕಾಲ ಕೇಂದ್ರವೇ ಶೇ 90ರಷ್ಟು ಅನುದಾನ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಕೃಷಿ ಮತ್ತು ಸಂಸ್ಕರಣಾ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರಕ್ಕೆ ಸದ್ಯ ₹80 ಕೋಟಿ ಅನುದಾನ ನೀಡಲಾಗುತ್ತಿದೆ. ಇದನ್ನು ₹800 ಕೋಟಿಗೆ ಹೆಚ್ಚಿಸಬೇಕು. ಜಿಲ್ಲಾ ಕೇಂದ್ರಗಳನ್ನು ಎಕ್ಸ್‌ಪೋರ್ಟ್‌ ಹಬ್‌ಗಳಾಗಿ ಅಭಿವೃದ್ಧಿಪಡಿಸಬೇಕು. ರಾಷ್ಟ್ರೀಯ ಮೇಕೆ ಮತ್ತು ಕುರಿ ಮಿಷನ್‌ ಯೋಜನೆಯನ್ನು ಅನುಷ್ಠಾನಗೊಳಿಸಬೇಕು ಎಂದು ಮನವಿ ಮಾಡಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries