ನವದೆಹಲಿ: ದೆಹಲಿಯಲ್ಲಿರುವ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 1ರಿಂದ 3ರವರೆಗಿರುವ 50 ಸ್ವಸಹಾಯ ಬ್ಯಾಗ್ ಚೆಕ್‌ಇನ್ ವ್ಯವಸ್ಥೆಯು ಕಾರ್ಯಾರಂಭ ಮಾಡಿದ್ದು, ಇದರಿಂದ ಬೋರ್ಡಿಂಗ್ ಪಾಸ್ ಹಾಗೂ ಬ್ಯಾಗ್ ಚೆಕ್‌ಇನ್ ಎರಡನ್ನೂ ಒಂದೇ ಕೇಂದ್ರದಲ್ಲಿ ಪ್ರಯಾಣಿಕರೇ ಮಾಡಬಹುದಾಗಿದೆ.
ನವದೆಹಲಿ: ದೆಹಲಿಯಲ್ಲಿರುವ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 1ರಿಂದ 3ರವರೆಗಿರುವ 50 ಸ್ವಸಹಾಯ ಬ್ಯಾಗ್ ಚೆಕ್‌ಇನ್ ವ್ಯವಸ್ಥೆಯು ಕಾರ್ಯಾರಂಭ ಮಾಡಿದ್ದು, ಇದರಿಂದ ಬೋರ್ಡಿಂಗ್ ಪಾಸ್ ಹಾಗೂ ಬ್ಯಾಗ್ ಚೆಕ್‌ಇನ್ ಎರಡನ್ನೂ ಒಂದೇ ಕೇಂದ್ರದಲ್ಲಿ ಪ್ರಯಾಣಿಕರೇ ಮಾಡಬಹುದಾಗಿದೆ.
ದೇಶದಲ್ಲೇ ಇಂಥ ವ್ಯವಸ್ಥೆ ಜಾರಿಗೊಳಿಸಿದ ಮೊದಲ ಹಾಗೂ ಜಗತ್ತಿನ 2ನೇ ವಿಮಾನ ನಿಲ್ದಾಣ ಇದು ಎಂದೆನ್ನಲಾಗಿದೆ. ಟೊರೊಂಟೊ ವಿಮಾನ ನಿಲ್ದಾಣದಲ್ಲಿ ಈ ವ್ಯವಸ್ಥೆ ಇದೆ. ಕಳೆದ ವರ್ಷ ಈ ವ್ಯವಸ್ಥೆಯನ್ನು ಟರ್ಮಿನಲ್ 3ರಲ್ಲಿ ಮಾತ್ರ ಅಳವಡಿಸಲಾಗಿತ್ತು. ಇದೀಗ 1ರಿಂದ 3ನೇ ಟರ್ಮಿನಲ್‌ವರೆಗೂ ಸೆಲ್ಫ್ ಸರ್ವೀಸ್ ಬ್ಯಾಗ್ ಡ್ರಾಪ್ ವ್ಯವಸ್ಥೆ ಲಭ್ಯ.
'ಈ ಸಾಧನದ ಅಳವಡಿಕೆಯಿಂದಾಗಿ ಪ್ರಯಾಣಿಕರು ಬೋರ್ಡಿಂಗ್ ಪಾಸ್ ಪಡೆಯಲು ಹಾಗೂ ಬ್ಯಾಗ್ ಚೆಕ್‌ಇನ್ ಮಾಡಲು ಉದ್ದನೆಯ ಸರತಿಸಾಲಿನಲ್ಲಿ ನಿಲ್ಲುವ ಗೋಜು ಇಲ್ಲ. ನೇರವಾಗಿ ಸ್ವಸಹಾಯ ಪದ್ಧತಿಯುಳ್ಳ ಕಿಯೋಸ್ಕ್ ಬಳಿ ಹೋಗಿ, ಬೋರ್ಡಿಂಗ್ ಪಾಸ್ ಪಡೆದು, ಅದನ್ನು ಸ್ಕ್ಯಾನ್ ಮಾಡುವ ಮೂಲಕ, ಇಲ್ಲವೇ ಬಯೊಮೆಟ್ರಿಕ್ ಕ್ಯಾಮೆರಾಗಳ ಸಹಾಯದಿಂದ ಬ್ಯಾಗ್‌ಗಳನ್ನು ಚೆಕ್‌ಇನ್ ಮಾಡಬಹುದು. ನಂತರ ಅದನ್ನು ಸಾಮಾನು ಸರಂಜಾಮು ಸಾಗಿಸುವ ಕನ್ವೆಯರ್ ಬೆಲ್ಟ್ ಮೇಲಿಟ್ಟರೆ ಸಾಕು. ಈ ಇಡೀ ಪ್ರಕ್ರಿಯೆ ಕೆಲವೇ ನಿಮಿಷಗಳಲ್ಲಿ ಪೂರ್ಣಗೊಳ್ಳಲಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ವಿಮಾನ ನಿಲ್ದಾಣದ ಸಿಇಒ ವಿದೇಹ ಕುಮಾರ್ ಜೈಪುರಿಯಾ, 'ಭಾರತದಲ್ಲಿ ಇಂಥದ್ದೊಂದು ಅತ್ಯಾಧುನಿಕ ಸೌಕರ್ಯವನ್ನು ಪ್ರಯಾಣಿಕರಿಗೆ ಪರಿಚಯಿಸುತ್ತಿರುವುದು ಸಂತಸವೆನಿಸಿದೆ. ನಮ್ಮ ಈ ನಿಲ್ದಾಣದ ಮೂಲಕ ಪ್ರಯಾಣಿಸುವವರಿಗೆ ಆಧುನಿಕ ತಂತ್ರಜ್ಞಾನದ ಮೂಲಕ ತ್ವರಿತ ಹಾಗೂ ಉತ್ತಮ ಸೌಲಭ್ಯಗಳನ್ನು ನೀಡುವುದು ನಮ್ಮ ಉದ್ದೇಶವಾಗಿದೆ. ಈ ನೂತನ ವ್ಯವಸ್ಥೆಯು ಕೇವಲ ಸಮಯ ಉಳಿತಾಯದಲ್ಲಿ ಮಾತ್ರವಲ್ಲ, ಚೆಕ್‌ಇನ್ ಹಾಗೂ ಬೋರ್ಡಿಂಗ್ ಪಾಸ್ ಪಡೆಯುವ ಪ್ರಕ್ರಿಯೆಯನ್ನು ಸರಳೀಕರಿಸಿ, ಪ್ರಯಾಣದ ಅನುಭೂತಿಯನ್ನು ಇನ್ನಷ್ಟು ಉತ್ತಮಗೊಳಿಸುವ ಪ್ರಯತ್ನವಾಗಿದೆ. ಈ ನಿಲ್ದಾಣದಲ್ಲಿ ಇಂಥ ಇನ್ನಷ್ಟು ವಿನೂತನ ಸೌಕರ್ಯಗಳನ್ನು ಭವಿಷ್ಯದಲ್ಲಿ ಅಳವಡಿಸುವತ್ತ ನಮ್ಮ ಪ್ರಯತ್ನ ಮುಂದುವರಿಯಲಿದೆ' ಎಂದಿದ್ದಾರೆ.
ಕ್ವಿಕ್ ಡ್ರಾಪ್ ಸೊಲೂಷನ್ ಸದ್ಯ ಏರ್ ಇಂಡಿಯಾ, ಇಂಡಿಗೊ, ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಗಳ ಪ್ರಯಾಣಿಕರಿಗೆ ಲಭ್ಯ ಎಂದು ವರದಿಯಾಗಿದೆ.