ನವದೆಹಲಿ: ಪ್ರಸಕ್ತ ವರ್ಷದ ಜಂಟಿ ಪ್ರವೇಶ ಪರೀಕ್ಷೆ (ಜೆಇಇ)- ಅಡ್ವಾನ್ಸ್‌ಡ್ ಫಲಿತಾಂಶ ಭಾನುವಾರ ಪ್ರಕಟವಾಗಿದ್ದು, ಐಐಟಿ ದೆಹಲಿ ವಲಯದ ವೇದ್ ಲಹೋಟಿ 360ಕ್ಕೆ 355 ಅಂಕಗಳನ್ನು ಗಳಿಸುವ ಮೂಲಕ ಮೊದಲ ರ್‍ಯಾಂಕ್ ಪಡೆದಿದ್ದಾರೆ.
ಮಹಿಳಾ ಅಭ್ಯರ್ಥಿಗಳ ಪೈಕಿ ಐಐಟಿ ಬಾಂಬೆ ವಲಯದ ದ್ವಿಜಾ ಧರ್ಮೇಶ್‌ಕುಮಾರ್ ಪಟೇಲ್ ಟಾಪರ್ ಆಗಿದ್ದಾರೆ.
ಅಗ್ರ 10 ರ್‍ಯಾಂಕ್ ಪಡೆದವರಲ್ಲಿ ನಾಲ್ವರು ಐಐಟಿ ಮದ್ರಾಸ್ ವಲಯದವರು. ಅಲ್ಲದೆ ಇದೇ ವಲಯದ ಗರಿಷ್ಠ ಸಂಖ್ಯೆಯ ಅಭ್ಯರ್ಥಿಗಳು ಈ ಬಾರಿ ಅರ್ಹತೆಗಳಿಸಿದ್ದಾರೆ. ನಂತರ ಸ್ಥಾನದಲ್ಲಿ ಐಐಟಿ ದೆಹಲಿ ಮತ್ತು ಐಐಟಿ ಬಾಂಬೆ ವಲಯಗಳಿವೆ.
ದೆಹಲಿ ಐಐಟಿ ವಲಯದ ಆದಿತ್ಯ ಎರಡನೇ ರ್‍ಯಾಂಕ್, ಮದ್ರಾಸ್ ವಲಯದ ಭೋಗಲ್‌ಪಲ್ಲಿ ಸಂದೇಶ್ ಮೂರನೇ ರ್‍ಯಾಂಕ್ ಪಡೆದಿದ್ದಾರೆ. ಐಐಟಿ ರೂರ್ಕಿ ವಲಯದ ರಿದಮ್ ಕೆಡಿಯಾ, ಐಐಟಿ ಮದ್ರಾಸ್ ವಲಯದ ಪುಟ್ಟಿ ಕುಶಾಲ್ ಕುಮಾರ್, ಐಐಟಿ ಬಾಂಬೆ ವಲಯದ ರಾಜ್‌ದೀಪ್ ಮಿಶ್ರಾ, ಐಐಟಿ ಮದ್ರಾಸ್ ವಲಯದ ತೇಜೇಶ್ವರ್, ಬಾಂಬೆ ವಲಯದ ಧ್ರುವಿ ಹೇಮಂತ್ ದೋಷಿ, ಮದ್ರಾಸ್ ವಲಯದ ಅಲ್ಲದಬೋನಾ ಎಸ್‌ಎಸ್‌ಡಿಬಿ ಸಿಧ್ವಿಕ್ ಸುಹಾಸ್ ನಂತರದ ಸ್ಥಾನಗಳನ್ನು ಪಡೆದಿದ್ದಾರೆ.
ಅಗ್ರ 500 ರ್‍ಯಾಂಕ್ ಒಳಗಿನ ಅಭ್ಯರ್ಥಿಗಳಲ್ಲಿ ಐಐಟಿ ಮದ್ರಾಸ್ ವಲಯದಿಂದ 145, ಬಾಂಬೆ ವಲಯದ 136 ಹಾಗೂ ದೆಹಲಿ ವಲಯದ 122 ಮಂದಿ ಇದ್ದಾರೆ. ಒಟ್ಟು ಏಳು ವಿದೇಶಿ ಅಭ್ಯರ್ಥಿಗಳು ಹಾಗೂ 179 ಸಾಗರೋತ್ತರ ಭಾರತೀಯ ನಾಗರಿಕರು (ಒಸಿಐ) ಈ ಪರೀಕ್ಷೆಯಲ್ಲಿ ಅರ್ಹತೆಗಳಿಸಿದ್ದಾರೆ.
ಮೇ 26ರಂದು ನಡೆದಿದ್ದ ಜೆಇಇ-ಅಡ್ವಾನ್ಸ್‌ಡ್ ಅನ್ನು ಒಟ್ಟು 1.80 ಲಕ್ಷ ಅಭ್ಯರ್ಥಿಗಳು ಬರೆದಿದ್ದರು. ಈ ಪೈಕಿ 7,964 ಮಹಿಳಾ ಅಭ್ಯರ್ಥಿಗಳು ಸೇರಿದಂತೆ ಒಟ್ಟು 48,248 ಅಭ್ಯರ್ಥಿಗಳು ಅರ್ಹತೆಗಳಿಸಿದ್ದಾರೆ.
ಅಖಿಲ ಭಾರತ ಮಟ್ಟದಲ್ಲಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಜೆಇಇ ಮೇನ್ ಪರೀಕ್ಷೆ ನಡೆಯುತ್ತದೆ. ದೇಶದ ಐಐಟಿ ಸೇರಿದಂತೆ ಪ್ರತಿಷ್ಠಿತ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲು ಜೆಇಇ ಅಡ್ವಾನ್ಸಡ್ ಪರೀಕ್ಷೆ ಜರುಗುತ್ತದೆ. ಜೆಇಇ ಅಡ್ವಾನ್ಸಡ್‌ಗೆ ಜೆಇಇ ಮೇನ್ ಅರ್ಹತಾ ಪರೀಕ್ಷೆಯಾಗಿರುತ್ತದೆ. ಜಂಟಿ ಸೀಟು ಹಂಚಿಕೆ ಕೌನ್ಸೆಲಿಂಗ್ ಸೋಮವಾರದಿಂದ ನಡೆಯಲಿದೆ.