ಮುಳ್ಳೇರಿಯ: ಕಾಸರಗೋಡಿನವರ ಪಾಲಿಗೆ ಕಯ್ಯಾರ ಕಿಞ್ಞಣ್ಣ ರೈಗಳು ಅಭಿಮಾನದ ವ್ಯಕ್ತಿತ್ವವಾಗಿದ್ದಾರೆ. ಇಂತಹವರ ಜನ್ಮದಿನಾಚರಣೆಯ ಮೂಲಕ ನಾವು ಪ್ರೇರಣೆ ಪಡೆದುಕೊಳ್ಳಬಹುದಾಗಿದೆ ಎಂಬುದಾಗಿ ಕಾರಡ್ಕ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಮುಖ್ಯ ಶಿಕ್ಷಕ ಸಂಜೀವ ಎಂ ಹೇಳಿದರು.
ಅವರು ಶಾಲೆಯಲ್ಲಿ ನಡೆದ ಕಯ್ಯಾರ ಕಿಞ್ಞಣ್ಣ ರೈ ಜನ್ಮ ದಿನಾಚರಣೆಯ ಅಂಗವಾಗಿ ನಡೆದ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಶಾಲೆಯ 10ನೇ ತರಗತಿಯ ವಿದ್ಯಾರ್ಥಿಗಳ ನೇತೃತ್ವದಲ್ಲಿ ಶಿಕ್ಷಕರ ಮಾರ್ಗದರ್ಶನದಲ್ಲಿ ಕಾರ್ಯಕ್ರಮವು ಜರಗಿತು. ವೇದಿಕೆಯಲ್ಲಿ ಕನ್ನಡ ವಿಭಾಗದ ಹಿರಿಯ ಶಿಕ್ಷಕಿ ಬೇಬಿ ರೇಖಾ, ನೌಕರ ಸಂಘದ ಕಾರ್ಯದರ್ಶಿ ಶಶಿ ಮಾಸ್ತರ್, ಶೋಭನಾ ಟೀಚರ್ ಮೊದಲಾದವರು ಉಪಸ್ಥಿತರಿದ್ದರು.
ಶಿಕ್ಷಕ ಡಾ.ಶ್ರೀಶ ಕುಮಾರ ಪಂಜಿತ್ತಡ್ಕ ಅವರು ಕವಿ ಪರಿಚಯದ ಬಿತ್ತಿ ಪತ್ರ ಬಿಡುಗಡೆಗೊಳಿಸಿದರು. ಕೀರ್ತನ ಅವರು ಕವಿ ಪರಿಚಯ ಮಾಡಿಕೊಟ್ಟರು. ಪೃಥ್ವಿರಾಜ್ ಅವರಿಂದ ಸ್ಲೈಡ್ ಶೋ ನಡೆಯಿತು. ಅನಘಾ ಸರಸ್ವತಿ ಅವರು ಪುಸ್ತಕ ಆಸ್ವಾದನ ಟಿಪ್ಪಣಿಯನ್ನು ಮಂಡಿಸಿದರು. ಕವಿ ಕೈಯಾರರ ಗುರು ಸಮಾನರಾದ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ವರ ಪರಿಚಯವನ್ನು ಯುಕ್ತಿ ಅವರು ಮಂಡಿಸಿದರು. ಕವಿ ಕೈಯಾರರ ಪ್ರಸಿದ್ಧ ಕವನ 'ಸಂತೆಗೆ ಹೋದನು ಭೀಮಣ್ಣ' ಇದರ ರೂಪಕವನ್ನು ವಿದ್ಯಾರ್ಥಿಗಳು ನಡೆಸಿಕೊಟ್ಟರು. ದೇವಿಕಾ ಅವರ ಹಾಡು ಹಾಗೂ ಇನಿಶಾ, ಜಗತ್ ಮತ್ತು ಕೀರ್ತೇಶ್ ಅವರ ಅಭಿನಯಗಳು ರೂಪಕದ ಯಶಸ್ಸಿಗೆ ಕಾರಣಗಳಾದವು. ಧನುಶ್ರೀ ಅವರಿಂದ ಕವಿತೆ, ಶ್ರೇಯ ಅವಳಿಂದ ಭಾಷಣ ಹಾಗೂ ಕಿರಿಯ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳಿಂದ ಅಭಿನಯ ಗೀತೆ ಮೆಚ್ಚುಗೆ ಪಡೆದವು. ವೀಕ್ಷಿತಾ ಸ್ವಾಗತಿಸಿ, ಕೀರ್ತನ ವಂದಿಸಿದರು. ಮೋನಿಷಾ ನಿರೂಪಿಸಿದರು.