ಬಿಜ್ನೋರ್: ರೀಲ್ ತಯಾರಿಕೆ ಹುಚ್ಚು ಹಲವರ ಪ್ರಾಣವನ್ನು ತೆಗೆಯುತ್ತಿದ್ದರೂ ಜನ ಎಚ್ಚೆತ್ತುಕೊಂಡಿಲ್ಲ. ಇದಕ್ಕೆ ಉತ್ತಮ ಉದಾಹರಣೆ ಬಿಜ್ನೋರ್‌ನಲ್ಲಿ ರೀಲ್ ಗಾಗಿ ವೀಡಿಯೋ ಮಾಡುತ್ತಿದ್ದ ಯುವಕನನ್ನು ಕಾಡಾನೆ ತನ್ನ ಸೊಂಡಲಿನಿಂದ ಜಾಡಿಸಿ ನೆಲಕ್ಕೆ ಕುಕ್ಕಿ ಕಾಲಿನಿಂದ ಹೊಸಕಿ ಹಾಕಿದೆ.
ಮೃತ ಯುವಕನ ಹೆಸರು ಮುರ್ಸ್ಲೀನ್. ಈತನ ರೀಲ್ ಹುಚ್ಚು ಕಾಡಾನೆ ರೆಚ್ಚಿಗೆದ್ದು ಬಲಿತೆಗೆದುಕೊಳ್ಳುವಂತಾಗಿದೆ. ಮುಸ್ಲೀನ್ ಗೆ ವಿಡಿಯೋ ಮಾಡಿ ಯೂಟ್ಯೂಬ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಹಾಕುವ ಹುಚ್ಚಿತ್ತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಘಟನೆ ವಿವರ: ಬುಧವಾರ ಬೆಳಗ್ಗೆ ಆನೆಯು ಸಾಹುವಾಲಾ ಅರಣ್ಯ ವ್ಯಾಪ್ತಿಯಿಂದ ಹೊರಟು ಹಬೀಬ್ವಾಲಾ ಗ್ರಾಮಕ್ಕೆ ಬಂದಿತ್ತು. 2ದಿನದಿಂದ ಬೀಡು ಬಿಟ್ಟಿದ್ದ ಕಾಡಾನೆ ಯನ್ನು ಅರಣ್ಯಕ್ಕೆ ಓಡಿಸುವ ಕೆಲಸದಲ್ಲಿ ಅರಣ್ಯ ಇಲಾಖೆ ತಂಡ ನಿರತವಾಗಿತ್ತು. ಮಥುರಾದಿಂದ ತಜ್ಞರ ತಂಡವನ್ನೂ ಕರೆಸಲಾಗಿತ್ತು. ಆದರೆ ಆನೆ ಅತ್ತಿಂದಿತ್ತ ಓಡಾಡುತ್ತಿದ್ದಾಗ ಕಪ್ಪು ಬಟ್ಟೆ ಧರಿಸಿದ್ದ ಮುಸ್ಲೀನ್ ವಿಡಿಯೋ ಮಾಡಲು ಮುಂದಾಗಿದ್ದಾನೆ.
ಮುರ್ಸ್ಲೀನ್ ಆನೆ ಹೋದ ಕಡೆ ಇವನೂ ಮೊಬೈಲ್ ಹಿಡಿದು ಓಡಿದ. ಇದರಿಂದಾಗಿ ಆನೆ ಅಸಮಾಧಾನಗೊಂಡು ಆತನನ್ನು ಸೊಂಡಲಿನಿಂದ ಮೇಲಕ್ಕೆತ್ತಿ ನೆಲಕ್ಕೆ ಬಡಿದಿದೆ. ಬಳಿಕ ಕಾಲಿನಿಂದ ಅವನನ್ನು ಹೊಸಕಿ ಹಾಕಿದೆ.
ನಮ್ಮ ಮುಂದೆ ಕಾಡಾನೆ ಮುರ್ಸ್ಲೀನ್ ನನ್ನು ಹೊಸಕಿ ಹಾಕಿದರೂ ಅವನನ್ನು ಉಳಿಸಲು ಸಾಧ್ಯವಾಗಲಿಲ್ಲ. ಹೇಗೋ ಆನೆಯನ್ನು ಓಡಿಸಲಾಯಿತು. ಮುರ್ಸ್ಲೀನ್ ನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆತ ಅಲ್ಲಿ ಮೃತಪಟ್ಟ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.