ಮುಳ್ಳೇರಿಯ: ಕೋಟೂರು ಯಕ್ಷತೂಣೀರ ಸಂಪ್ರತಿಷ್ಠಾನದ ಒಂಭತ್ತನೇ ವಾರ್ಷಿಕೋತ್ಸವವು ಮುಳಿಯಾರು ಶ್ರೀ ಸುಬ್ರಹ್ಮಣ್ಯಸ್ವಾಮೀ ಕ್ಷೇತ್ರ ಸಭಾಂಗಣದಲ್ಲಿ ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸಹಯೋಗದಲ್ಲಿ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನವಾಯಿತು.
ಎಡನೀರು ಮಠಾಧೀಶರಾದ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರು ಜ್ಯೋತಿ ಪ್ರಜ್ವಲನಗೈದು ಆಶೀರ್ವಚನವಿತ್ತು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಸುಬ್ರಹ್ಮಣ್ಯ ಭಟ್ ಅಡ್ಕ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಬೆಂಗಳೂರಿನ ಮನೋವಿಜ್ಞಾನಿಗಳಾದ ನವೀನ ಎಲ್ಲಂಗಳ ಇವರು ಶುಭಹಾರೈಸಿದರು.
ಈ ಸಂದರ್ಭದಲ್ಲಿ ಪ್ರಸಿದ್ಧ ಭಾಗವತರಾದ ಶಿವಶಂಕರ ಭಟ್ ತಲ್ಪನಾಜೆ ಇವರಿಗೆ ಪೆರಡಂಜಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಪ್ರತಿಷ್ಠಾನದ ವತಿಯಿಂದ ಸೀತಾರಾಮ ಬಳ್ಳುಳ್ಳಾಯ ಮತ್ತು ಕೃಷ್ಣ ಭಟ್ ಅಡ್ಕ ಇವರನ್ನು ಶಾಲು ಹೊದೆಸಿ ಫಲ, ಸ್ಮರಣಿಕೆ ಮತ್ತು ಸನ್ಮಾನಪತ್ರಗಳನ್ನಿತ್ತು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕೈಗಾರಿಕಾರಂಗದಲ್ಲಿ ಜಿಲ್ಲೆಯ ಅತ್ಯುತ್ತಮ ಉತ್ಪಾದನಾ ಉದ್ಯಮ ಪ್ರಶಸ್ತಿ ಲಭಿಸಿದ ಮುರಳಿಕೃಷ್ಣ ಮತ್ತು ಈ ಸಾಧನೆಯಲ್ಲಿ ಜೊತೆಗಿದ್ದು ಸಹಕರಿಸಿದ ಹರಿ ಕೃಷ್ಣ ಸ್ಕಂದ ಇವರನ್ನು ಅಭಿನಂದಿಸಲಾಯಿತು.
ಎಸ್ ಎಸ್ ಎಲ್ ಸಿ ಮತ್ತು ಪ್ಲಸ್ ಟು ತರಗತಿಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಗೋವಿಂದ ಬಳ್ಳಮೂಲೆ ಅಭಿನಂದನಾ ಭಾಷಣ ಮಾಡಿದರು. ಪಲ್ಲವಿ ಹರಿಕೃಷ್ಣ ಪೆರಡಂಜಿ, ಹರಿಕೃಷ್ಣ ಪೆರಡಂಜಿ, ಮಧುರಕಾನನ ಗಣಪತಿ ಭಟ್ ಇವರು ಪ್ರಶಸ್ತಿ ಪತ್ರವನ್ನು ವಾಚಿಸಿದರು.
ವರ್ಣಪ್ರಸಾದ್ ವಯನಾಡು ಪ್ರಾರ್ಥನೆ ಹಾಡಿ ಕಾರ್ಯದರ್ಶಿ ಮುರಳೀಕೃಷ್ಣಸ್ಕಂದ ಪ್ರಸ್ತಾವನೆ ಮಾಡಿ ಸ್ವಾಗತಿಸಿದರು. ಶಿವಕುಮಾರ್ ಅಡ್ಕ ಕಾರ್ಯಕ್ರಮ ನಿರೂಪಿಸಿದರು. ವಿದುಷಿಃ ಅನುಪಮಾ ರಾಘವೇಂದ್ರ ಉಡುಪುಮೂಲೆ ವಂದಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಕ್ಕಳಿಂದ ಶರಸೇತುಬಂಧನ ತಾಳಮದ್ದಳೆ ಜರಗಿತು. ಸಾಧ್ವಿಕೃಷ್ಣ ವಯನಾಡು ಇವಳಿಂದ ನೃತ್ಯಾರ್ಪಣ ಕಾರ್ಯಕ್ರಮ ಜರಗಿತು. ಬಳಿಕ ನರಕಾಸುರ ಮೋಕ್ಷ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.