ತಿರುವನಂತಪುರಂ: ಅರಣ್ಯ ಭೂಮಿಗೆ ಬದಲಾಗಿ, ಇತರ ಜಾಗ ಪತ್ತೆಹಚ್ಚಿ ರಾಜ್ಯದ ಹೆಮ್ಮೆಯ ಯೋಜನೆ 'ಮಲೆನಾಡು ಹೆದ್ದಾರಿ'ಕಾಮಗಾರಿ ಶೀಘ್ರ ಪೂರ್ತಿಗೊಳಿಸಲಾಗುವುದು ಎಂದು ಲೋಕೋಪಯೋಗಿ ಹಾಗೂ ಪ್ರವಾಸೋದ್ಯಮ ಖಾತೆ ಸಚಿವ ಪಿ.ಎ ಮಹಮ್ಮದ್ ರಿಯಾಸ್ ವಿಧಾನಸಭೆಯಲ್ಲಿ ಭರವಸೆ ನೀಡಿದ್ದಾರೆ.
ಕಾಸರಗೋಡು ಉದುಮ ಶಾಸಕ ಸಿ.ಎಚ್ ಕುಞಂಬು ಅವರು ಸಲ್ಲಿಸಿದ ಸಬ್‍ಮಿಶನ್‍ಗೆ ಉತ್ತರಿಸಿ ಈ ಮಾಹಿತಿ ನೀಡಿದ್ದಾರೆ. ಮಂಜೇಶ್ವರ ವರ್ಕಾಡಿಯ ನಂದಾರಪದವಿನಿಂದ ಆರಂಭಗೊಂಡು ತಿರುವನಂತಪುರ ವರೆಗೆ ಮಲೆನಾಡು ಹೆದ್ದಾರಿ ಕಾರ್ಯಗತಗೊಳ್ಳಲಿದ್ದು, ಇದರಲ್ಲಿ ನಂದಾರಪದವು-ಚೇವಾರು ರೀಚ್ ಪೂರ್ತಿಗೊಳಿಸಲಾಗಿದೆ. ಕೋಳಿಚ್ಚಾಲ್-ಎಡಪರಂಬ ರೀಚ್ ಅರಣ್ಯ ಹಾದಿಯಾಗಿ ಸಂಚರಿಸುವ ಹಿನ್ನೆಲೆಯಲ್ಲಿ ವಿಳಂಬವುಂಟಾಗಿದ್ದು, ಇದಕ್ಕೆ ಬದಲಿ ಜಾಗ ಕಂಡುಕೊಳ್ಳಲಾಗುವುದು. ವೆಳ್ಳರಿಕುಂಡು ತಾಲೂಕಿನ ಭೀಮನಡಿಯಲ್ಲಿ ಕಂದಾಯ ಇಲಾಖೆ ಮಂಜೂರುಗೊಳಿಸಿದ ಜಾಗದಲ್ಲಿ ರಸ್ತೆನಿರ್ಮಾಣಕ್ಕೆ ಮುಂದಾಗುತ್ತಿದ್ದಂತೆ, ಉಡುಪಿ-ಕರಿಂದಳ ವಿದ್ಯುತ್ ಯೋಜನೆಗಾಗಿ ಈ ಭೂಮಿಯನ್ನು ಬಿಟ್ಟುಕೊಟ್ಟ ಹಿನ್ನಲೆಯಲ್ಲಿ ಈ ಹಿಂದಿನ ಸರ್ಕಾರಿ ಆದೇಶ ಹಿಂತೆಗೆದು, ರಸ್ತೆನಿರ್ಮಾಣಕ್ಕೆ ಬದಲಿ ಜಾಗ ಕಂಡುಕೊಳ್ಳುವ ಅನಿವಾರ್ಯತೆ ಎದುರಾಗಿತ್ತು. ಮಲೆನಾಡು ಹೆದ್ದಾರಿ ಹಾದುಹೋಗುವ ಕಾವುಂಗಾಲ್ ಸೇತುವೆ, ಸಂಪರ್ಕ ರಸ್ತೆ ಎಂಬಿವುಗಳ ಅಲೈನ್‍ಮೆಂಟ್ ಅಂತಿಮ ಹಂತದಲ್ಲಿರುವುದಾಗಿ ಸಚಿವರು ತಿಳಿಸಿದರು.