ವಾಷಿಂಗ್ಟನ್: ಅಕ್ರಮ ಗನ್ ಖರೀದಿಗೆ ಸಂಬಂಧಿಸಿದ ಕ್ರಿಮಿನಲ್ ಪ್ರಕರಣದಲ್ಲಿ ತಮ್ಮ ಮಗ ಹಂಟರ್ ಬೈಡನ್ ತಪ್ಪಿತಸ್ಥನೆಂದು ಸಾಬೀತಾದರೆ ಅವನನ್ನು ಕ್ಷಮಿಸುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿರುವುದಾಗಿ ಸಿಎನ್‌ಎನ್ ವರದಿ ಮಾಡಿದೆ.
ಡೆಲವೇರ್ ರಾಜ್ಯದಲ್ಲಿ ನಡೆಯುತ್ತಿರುವ ತನಿಖೆಯ ವರದಿ ಏನೇ ಬಂದರೂ ಅದನ್ನು ಸ್ವೀಕರಿಸುವುದಾಗಿ ಬೈಡನ್ ಸ್ಪಷ್ಟಪಡಿಸಿದ್ದಾರೆ.
ಸಹೋದರ ಬಿಯೊ ಸಾವಿನ ಬಳಿಕ ಮಾದಕ ವ್ಯಸನಿಯಾಗಿದ್ದ ಬೈಡನ್ ಪುತ್ರ ಹಂಟರ್ ಇದೀಗ ಕ್ರಿಮಿನಲ್ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವುದು ಬೈಡನ್ ಕುಟುಂಬಕ್ಕೆ ನೋವಿನ ಸಂಗತಿಯಾಗಿದೆ.
ಫ್ರಾನ್ಸ್‌ಗೆ ತೆರಳುವ ಮುನ್ನ ಅಮೆರಿಕದ ಪ್ರಥಮ ಮಹಿಳೆ ಜಿಲ್ ಬೈಡನ್ ಸಹ ವಿಚಾರಣೆ ಎದುರಿಸಿದ್ದಾರೆ.
ಈ ಹಿಂದೆ ಶ್ವೇತಭವನವು ಸಹ ಬೈಡನ್ ತಮ್ಮ ಮಗನನ್ನು ಕ್ಷಮಿಸುವುದಿಲ್ಲ ಎಂದು ಹೇಳಿತ್ತು. 'ನಾನು ಬಹಳ ಸ್ಪಷ್ಟವಾಗಿ ಹೇಳುತ್ತಿದ್ದೇನೆ. ಅಧ್ಯಕ್ಷರು ಅವರ ಮಗನನ್ನು ಕ್ಷಮಿಸುವುದಿಲ್ಲ'ಎಂದು ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಕರೈನ್ ಜೀನ್ ಪೀರೆ ಕಳೆದ ಡಿಸೆಂಬರ್‌ನಲ್ಲಿ ಹೇಳಿದ್ದರು.
ಅಕ್ರಮವಾಗಿ ಗನ್ ಖರೀದಿ ಮತ್ತು ಮಾದಕ ವಸ್ತು ಸೇವಿಸಿದ ಸಂದರ್ಭದಲ್ಲಿ ಗನ್ ಇಟ್ಟುಕೊಂಡಿದ್ದ ಆರೋಪವು ಬೈಡನ್ ಪುತ್ರ ಹಂಟರ್ ಬೈಡನ್ ಮೇಲಿದ್ದು, ಈ ಎರಡೂ ಆರೋಪಗಳು ಅಮೆರಿಕದ ಫೆಡರಲ್ ಕಾನೂನಿನ ಉಲ್ಲಂಘನೆಯಾಗಿವೆ.
ಅಮೆರಿಕದ ಇತಿಹಾಸದಲ್ಲಿ ಅಧ್ಯಕ್ಷರೊಬ್ಬರ ಮಗ ವಿಚಾರಣೆ ಎದುರಿಸುತ್ತಿರುವುದು ಇದೇ ಮೊದಲಾಗಿದೆ.
ಮೂರು ಆರೋಪಗಳಲ್ಲಿ ಹಂಟರ್ ಬೈಡನ್ ನಿರಪರಾಧಿ ಎಂದು ಸಾಬೀತಾಗಿದೆ. ಆದರೆ, ಹಂಟರ್ ಬೈಡನ್ ಮದ್ಯ ಮತ್ತು ಕೊಕೇನ್ ವ್ಯಸನಿಯಾಗಿರುವುದನ್ನು ಒಪ್ಪಿಕೊಂಡಿದ್ದಾರೆ.
'ದೇಶದ ಅಧ್ಯಕ್ಷನಾಗಿ ನಾನು ವಿಚಾರಣೆಯಲ್ಲಿರುವ ಪ್ರಕರಣಗಳ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಒಬ್ಬ ತಂದೆಯಾಗಿ ಅವನ ಬಗ್ಗೆ ಬಹಳ ಪ್ರೀತಿ ಇದೆ. ಅವನ ಸಾಮರ್ಥ್ಯದ ಬಗ್ಗೆ ಗೌರವವಿದೆ. ನಮ್ಮ ಕುಟುಂಬ ಮತ್ತು ಪತ್ನಿ ಜಿಲ್ ಅವನ ಜೊತೆಗಿರಲಿದ್ದೇವೆ'ಎಂದು ಬೈಡನ್ ಹೇಳಿದ್ದಾರೆ.