HEALTH TIPS

ಅಮೆರಿಕ ಅಧ್ಯಕ್ಷೀಯ ಚುನಾವಣೆ: ಗುರುವಾರ ನಡೆಯಲಿದೆ ಬೈಡನ್-ಟ್ರಂಪ್ ಮುಖಾಮುಖಿ

         ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಜೋ ಬೈಡನ್ ಹಾಗೂ ಪ್ರತಿಸ್ಪರ್ಧಿಯೂ ಆಗಿರುವ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮುಖಾಮುಖಿಯಾಗಲಿದ್ದು, ಅವರ ನಡುವಿನ ಪರಸ್ಪರ ಚರ್ಚೆಯು ಗುರುವಾರ ಟಿ.ವಿ.ಯಲ್ಲಿ ಪ್ರಸಾರವಾಗಲಿದೆ.

          ಅಟ್ಲಾಂಟಾದಲ್ಲಿ ನಡೆಯಲಿರುವ ಈ ಮುಖಾಮುಖಿ ಕಾರ್ಯಕ್ರಮವು ಸಿಎನ್‌ಎನ್‌ ವಾಹಿನಿಯಲ್ಲಿ ಅಮೆರಿಕದ ಕಾಲಮಾನ ರಾತ್ರಿ 9ಕ್ಕೆ ಪ್ರಸಾರವಾಗಲಿದೆ.

           2024ರ ಅಧ್ಯಕ್ಷೀಯ ಚುನಾವಣೆ ಮೇಲಿನ ಚರ್ಚೆಯ ಮೊದಲ ನೇರಪ್ರಸಾರ ಕಾರ್ಯಕ್ರಮ ಇದಾಗಿದೆ.

          ಇಬ್ಬರು ಸ್ಪರ್ಧಿಗಳ ನಡುವೆ ರಾಷ್ಟ್ರದ ನೀತಿ ನಿರೂಪಣೆಗಿಂತ ಹೆಚ್ಚಾಗಿ ವೈಯಕ್ತಿಕ ಆರೋಪಗಳೇ ಹೆಚ್ಚಾಗಿ ಕೇಳಿಬರುತ್ತಿವೆ. ಒಬ್ಬರು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಗುಡುಗಿದರೆ, ಮತ್ತೊಬ್ಬರು ಮುದುಕ ಹಾಗೂ ಭ್ರಷ್ಟಾಚಾರಿ ಎಂದು ಪರಸ್ಪರ ಜರಿಯುತ್ತಿದ್ದಾರೆ.


              ಅಮೆರಿಕದ ಅಧ್ಯಕ್ಷ ಹುದ್ದೆಗೆ ಈ ಬಾರಿ 81 ವರ್ಷದ ಬೈಡನ್ ಅವರ ವಿರುದ್ಧ 78 ವರ್ಷದ ಟ್ರಂಪ್ ಸ್ಪರ್ಧಿಸಿದ್ದಾರೆ. ಗೆಲುವಿಗಾಗಿ ರಾಷ್ಟ್ರಮಟ್ಟದ ಅಭಿಪ್ರಾಯ ಸಂಗ್ರಹ ಅಗತ್ಯ. ನ. 5ಕ್ಕೆ ಚುನಾವಣೆ ಘೋಷಣೆಯಾಗಿದ್ದು, ಈ ಅವಧಿಯಲ್ಲಿ ಈ ಪ್ರಕ್ರಿಯೆ ಜಾರಿಯಲ್ಲಿದೆ. ಆದರೆ ಈಗಲೂ ಹಲವು ಮತದಾರರು ಯಾರನ್ನು ಬೆಂಬಲಿಸಬೇಕು ಎಂದು ನಿರ್ಧರಿಸಿಲ್ಲ. ಡೆಮಾಕ್ರೆಟಿಕ್ ಪಕ್ಷದ ಅಧ್ಯಕ್ಷ ಹಾಗೂ ರಿಪಬ್ಲಿಕನ್ ಪಕ್ಷದ ಸ್ಪರ್ಧಿಯ ನಡುವೆ ರಾಷ್ಟ್ರದ ನೀತಿ ನಿರೂಪಣೆ ಕುರಿತ ಚರ್ಚೆಗಿಂತ ವೈಯಕ್ತಿಕ ನೆಲೆಯಲ್ಲೇ ಚರ್ಚೆಗಳು ನಡೆಯುವ ಸಾಧ್ಯತೆ ಇದೆ ಎಂದೆನ್ನಲಾಗಿದೆ.

ವೈಯಕ್ತಿಕ ಫಿಟ್‌ನೆಸ್‌ ಪ್ರಶ್ನೆ

       ಇಬ್ಬರು ಅಭ್ಯರ್ಥಿಗಳ ನಡುವೆ ದೈಹಿಕ ಸಾಮರ್ಥ್ಯದ ಕುರಿತು ಚರ್ಚೆಗಳು ನಡೆಯುವ ಸಾಧ್ಯತೆ ಇದೆ. ಬೈಡನ್ ಅವರು ದೈಹಿಕವಾಗಿ ಹಾಗೂ ಮಾನಸಿಕವಾಗಿಯೂ ಹುದ್ದೆಗೆ ಅರ್ಹರಲ್ಲ ಎಂದು ಈಗಾಗಲೇ ಟ್ರಂಪ್ ಆರೋಪಿಸಿದ್ದಾರೆ. ಅವರ ದೈಹಿಕ ಸಾಮರ್ಥ್ಯ ದಿನದಿನಕ್ಕೂ ಕ್ಷೀಣಿಸುತ್ತಿದೆ. ಮಾತುಗಳು ತಪ್ಪುತ್ತಿವೆ ಎಂಬ ಆರೋಪಗಳು ಟ್ರಂಪ್ ಬೆಂಬಲಿಗರಿಂದ ಕೇಳಿಬಂದಿದೆ. ಶಸ್ತ್ರಾಸ್ತ್ರ ಪ್ರಕರಣದಲ್ಲಿ ಬೈಡನ್ ಪುತ್ರನಿಗೆ ಶಿಕ್ಷೆ ಆಗಿರುವುದು, ಮಾದಕದ್ರವ್ಯ ಸೇವನೆಯೂ ಈ ಬಾರಿ ಚುನಾವಣೆಯಲ್ಲಿ ಚರ್ಚೆಯಾಗುತ್ತಿದೆ.

          ಟ್ರಂಪ್ ಅವರು ಬದ್ಧತೆ ಇಲ್ಲದ ಹಾಗೂ ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಬೈಡನ್ ಆರೋಪಿಸಿದ್ದಾರೆ. ಅಮೆರಿಕದ ಕ್ಯಾಪಿಟಲ್ ಮೇಲೆ ಟ್ರಂಪ್ ಬೆಂಬಲಿಗರಿಂದ 2021ರ ಜ. 6ರಂದು ನಡೆದ ದಾಳಿ, ತಮ್ಮ ಮೇಲಿನ ಆರೋಪವನ್ನು ತಿರುಚಿದ ಪ್ರಕರಣ, ನೀಲಿ ಚಿತ್ರದ ತಾರೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪಗಳು ಟ್ರಂಪ್‌ ಮೇಲಿರುವುದನ್ನು ಬೈಡನ್ ಹೇಳುವ ಸಾಧ್ಯತೆ ಇದೆ.

ಅಸಹನೆಯ ಮೂರ್ತರೂಪ

            ಇಬ್ಬರು ಸ್ಪರ್ಧಿಗಳು ತಮ್ಮ ಅಸಹನೆ ಹಾಗೂ ಸಿಟ್ಟಿಗಾಗಿಯೇ ಹೆಚ್ಚು ಚರ್ಚೆಗೆ ಒಳಪಟ್ಟವರು. ಜತೆಗೆ ವಿಷಯವನ್ನು ದೊಡ್ಡದು ಮಾಡುವುದು ಹಾಗೂ ಸುಳ್ಳು ಆರೋಪಗಳನ್ನು ಮಾಡುವುದರಲ್ಲಿ ಟ್ರಂಪ್ ಸಿದ್ಧಹಸ್ತರು ಎಂಬ ಮಾತುಗಳು ಸಾಮಾನ್ಯವಾಗಿದೆ. ಟ್ರಂಪ್ ವಿರುದ್ಧ ಬೈಡನ್ ಕೂಡಾ ಕೆಲವೊಂದು ಕಥೆಗಳನ್ನು ಕಟ್ಟಿ ಹೇಳಿದ ಉದಾಹರಣೆಯೂ ಇದೆ.

               2020ರ ಚುನಾವಣೆಯ ಸಂದರ್ಭದಲ್ಲಿ ಇದೇ ರೀತಿಯ ಅಭಿಪ್ರಾಯ ಸಂಗ್ರಹ ಮುಖಾಮುಖಿಯಲ್ಲಿ ಟ್ರಂಪ್ ಅವರನ್ನು ಬೈಡನ್ ಹಿಮ್ಮೆಟ್ಟಿಸಿದ್ದರು. ಈ ಬಾರಿ ಯಾರ ಕೈ ಮೇಲಾಗಲಿದೆ ಎಂಬ ಚರ್ಚೆ ಅಮೆರಿಕದ ಮತದಾರರಲ್ಲಿ ಮನೆಮಾಡಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries