ನೀವು ದೋಸೆಯಲ್ಲಿ ಎಷ್ಟು ವಿಧವಾದ ದೋಸೆ ನೋಡಿರುತ್ತೀರಿ. ಅದ್ರಲ್ಲೂ ವಿಶೇಷ ದೋಸೆ ರೆಸಿಪಿ ಅಂದ್ರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಸಾಮಾನ್ಯವಾಗಿ ನಾವು ನೀವು ಮನೆಯಲ್ಲಿ ಉದ್ದು ಹಾಕಿ ದೋಸೆ ಮಾಡುತ್ತೇವೆ. ಒಂದಿಷ್ಟು ವೆರೈಟಿ ದೋಸೆಯನ್ನ ನಾವು ಸಹ ಪ್ರಯೋಗ ಮಾಡಿರುತ್ತೇವೆ.
ಅದ್ರಲ್ಲೂ ಮಸಾಲ ದೋಸೆ ಎಲ್ಲರಿಗೂ ಇಷ್ಟವಾಗುವ ದೋಸೆ, ಇದನ್ನು ಬಿಟ್ಟು ಬೆಣ್ಣೆ ದೋಸೆ, ಈರುಳ್ಳಿ ದೋಸೆ, ಖಾಲಿ ದೋಸೆ, ರವಾ ದೋಸೆ, ಹೀಗೆ ನಾನಾ ರೀತಿಯ ಬಾಯಲ್ಲಿ ನೀರು ತರಿಸುವ ದೋಸೆಗಳಿವೆ. ಅದ್ರೆ ನೀವು ಎಂದಾದ್ರು ಈ ಮಜ್ಜಿಗೆ ದೋಸೆ ಸವಿದಿದ್ದೀರಾ?
ಹೌದು ನೀವು ಕೇಳಿದ್ದು ಮಜ್ಜಿಗೆ ದೋಸೆ ಹೆಸರು. ಕೆಲವರು ಈ ಹೆಸರನ್ನೇ ಹೊಸದಾಗಿ ಕೇಳಿರಬಹುದು. ಆದ್ರೆ ಈ ರೀತಿ ಮಜ್ಜಿಗೆ ದೋಸೆ ಎಂಬ ದೋಸೆಯ ರೆಸಿಪಿ ಒಂದಿದೆ. ಸಿಕ್ಕಾಪಟ್ಟೆ ರುಚಿಯ, ಮೃದುವಾದ ದೋಸೆ ಇದಾಗಿದೆ. ಬೆಳಗ್ಗೆಯ ತಿಂಡಿಗೆ ಮೃದುವಾಗಿ ರುಚಿಕರ ದೋಸೆ ಮಾಡಬೇಕು, ದೋಸೆಯಲ್ಲಿ ವೆರೈಟಿ ಏನಾದರು ಟ್ರೈ ಮಾಡಬೇಕು ಎಂದುಕೊಂಡಿದ್ದರೆ ಈ ದೋಸೆ ನಿಮಗಾಗಿ ಇಲ್ಲಿದೆ.
ಹಾಗಾದ್ರೆ ನಾವಿಂದು ಈ ಮಜ್ಜಿಗೆ ದೋಸೆ ಮಾಡುವುದು ಹೇಗೆ? ಇದನ್ನು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡಲು ಹೇಗೆ ಹಿಟ್ಟು ರೆಡಿ ಮಾಡಿಕೊಳ್ಳಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮಜ್ಜಿಗೆ ದೋಸೆ ಮಾಡಲು ಬೇಕಾಗುವ ಪದಾರ್ಥಗಳು
- ಅಕ್ಕಿ - 1 ಬೌಲ್
- ಮೆಂತ್ಯ - 1 ಚಮಚ
- ಅವಲಕ್ಕಿ - 1/2 ಬೌಲ್
- ಉಪ್ಪು - 1/2 ಚಮಚ
- ಮಜ್ಜಿಗೆ - 1/2 ಲೀಟರ್
- ಎಣ್ಣೆ
ಮಜ್ಜಿಗೆ ದೋಸೆ ಮಾಡುವುದು ಹೇಗೆ?
aಅಕ್ಕಿಯನ್ನು ತೊಳೆದು ನೀರಿನಿಂದ ತೆಗೆದು ಇಡಿ. ಮತ್ತೆ ಸ್ವಲ್ಪವೇ ಮೆಂತ್ಯವನ್ನು ಸಹ ತೊಳೆದು ಅದನ್ನೂ ಕೂಡ ಅಕ್ಕಿ ಜೊತೆ ಇಡಿ. ಬಳಿಕ ಅವಲಕ್ಕಿ ತೊಳೆದು ಹಾಕಿಕೊಳ್ಳಿ. ಈ ಎಲ್ಲಾ ವಸ್ತುವನ್ನು ಮಜ್ಜಿಗೆಯಲ್ಲಿ ನೆನೆಸಿಡಿ. ಸುಮಾರು 8ರಿಂದ 9 ಗಂಟೆ ಮಜ್ಜಿಗೆಯಲ್ಲಿ ನೆನೆಸಿಡಬೇಕು.
ಬಳಿಕ ಇದನ್ನು ತೆಗೆದು ಮಿಕ್ಸಿ ಜಾರ್‌ಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ಈ ಹಿಟ್ಟನ್ನು ಚೆನ್ನಾಗಿ ಕಲಸಿಕೊಳ್ಳಿ. ಇದಕ್ಕೆ ಹುಳಿ ಮಜ್ಜಿಗೆ ಹಾಕಬಾರದು. ಅದೇ ದಿನದ ಮಜ್ಜಿಗೆ ಬಳಸಿ. ಬಳಿಕ ಇದನ್ನು ಸಹ ಒಂದು ದಿನ ಬಿಡಬೇಕು. ಈ ಹಿಟ್ಟು ಚೆನ್ನಾಗಿ ಬರಬೇಕು ಅಂದ್ರ ಒಂದು ದಿನ ಬಿಡಬೇಕು.
ಒಂದು ದಿನದ ಬಳಿಕ ಒಂದು ಉಪ್ಪು ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ಈಗ ಒಲೆ ಮೇಲೆ ಕಾವಲಿ ಇಟ್ಟು ಎಣ್ಣೆ ಹಚ್ಚಿಕೊಳ್ಳಿ. ಎಣ್ಣೆ ಕಾದ ಬಳಿಕ ಕಾವಲಿ ಮಧ್ಯದಲ್ಲಿ ಈ ಹಿಟ್ಟು ಹಾಕಿ ಸ್ವಲ್ಪ ಹರಡಿಕೊಳ್ಳಿ. 2 ನಿಮಿಷಗಳ ಕಾಲ ಒಂದು ಕಡೆ ಕಾಯಿಸಿಕೊಳ್ಳುವಂತೆ ಎರಡು ಕಡೆಗಳಲ್ಲಿ ಕಾಯಿಸಿಕೊಳ್ಳಿ. ನೀವು ಎಣ್ಣೆ ಬದಲಾಗಿ ತುಪ್ಪ ಸಹ ಬಳಸಬಹುದು.
ಈ ದೋಸೆ ಯಾವುದೇ ಚಟ್ನಿ ಜೊತೆಗೆ ಸವಿಯಬಹುದು. ತುಂಬಾನೆ ಮೃದುವಾದ ದೋಸೆ ಇದಾಗಿದೆ. ಹೀಗಾಗಿ ಎಲ್ಲರಿಗೂ ಇಷ್ಟವಾಗಲಿದೆ. ಈ ದೋಸೆ ತಕ್ಷಣ ಮಾಡಿ ಸವಿಯಲು ಸಾಧ್ಯವಿಲ್ಲ ಹೀಗಾಗಿ ಹಿಂದಿನ ದಿನವೇ ಇದಕ್ಕೆ ಸಿದ್ಧತೆ ನಡೆಸಬೇಕು. ಇನ್ನು ಮಜ್ಜಿಗೆ ಇಲ್ಲದಿದ್ದರೆ ಮೊಸರು ಸಹ ಬಳಸಬಹುದು. ಒಟ್ಟಿನಲ್ಲಿ ಹುಳಿ ಬಾರದಂತೆ ಮಜ್ಜಿಗೆ ದೋಸೆ ಮಾಡಿ ಸವಿಯಿರಿ.