HEALTH TIPS

ಕಲೆಕ್ಟ್ರೇಟ್ ವಠಾರದಲ್ಲೇ ಶುಚೀಕರಣಕ್ಕಿಲ್ಲ ಆದ್ಯತೆ-ಜನತೆಗಷ್ಟೆ ಬೋಧನೆ: ಸಿವಿಲ್ ಸ್ಟೇಶನ್ ವಠಾರ ತ್ಯಾಜ್ಯಮಯ, ಹೊಂಡಬಿದ್ದ ರಸ್ತೆಗಳು

               ಕಾಸರಗೋಡು: ಜಿಲ್ಲೆಯ ಆಡಳಿತ ಯಂತ್ರ ಮುನ್ನಡೆಸುತ್ತಿರುವ ಪ್ರಮುಖ ಶಕ್ತಿಕೇಂದ್ರ ವಿದ್ಯಾನಗರದ ಸಿವಿಲ್‍ಸ್ಟೇಶನ್ ವಠಾರ ಇಂದು ತ್ಯಾಜ್ಯಮಯವಾಗುತ್ತಿದೆ. ವಿವಿಧ ಇಲಾಖೆಗಳ ನೂರಕ್ಕೂ ಹೆಚ್ಚು ಕಚೇರಿಗಳು, ಪೊಲೀಸ್ ಠಾಣೆ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಯೋಜನಾ ಕಚೇರಿ ಸೇರಿದಂತೆ ಹತ್ತು ಹಲವು ಕಟ್ಟಡಗಳು ಈ ಪ್ರದೇಶದಲ್ಲಿದ್ದು, ಇಲ್ಲಿ ಶುಚಿತ್ವ ಮರೀಚಿಕೆಯಾಗುತ್ತಿದೆ.

             ಶುಚಿತ್ವದ ಬಗ್ಗೆ ಊರಿಗೆ ಬೋಧನೆ ನಡೆಸುತ್ತಿರುವ ಶುಚಿತ್ವ ಮಿಷನ್, ಹಸಿರು ಕೇರಳ ಯೋಜನೆಗಳಿಗೆ ಸಂಬಂಧಿಸಿದ ಕಚೇರಿಗಳು ಸಿವಿಲ್ ಸ್ಟೇಶನ್‍ನಲ್ಲೇ ಕಾರ್ಯಾಚರಿಸುತ್ತಿದ್ದರೂ, ತಮ್ಮ ಮೂಗಿನ ನೇರಕ್ಕಿರುವ ತ್ಯಾಜ್ಯ ಗೂಡಾರ ಕಂಡೂಕಾಣದಂತೆ ವರ್ತಿಸುತ್ತಿರುವ ಬಗ್ಗೆ ಸಾರ್ವಜನಿಕರೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

               ಆರ್‍ಟಿಓ ಕಚೇರಿ ಹಾಗೂ ಜಿಲ್ಲಾ ಯೋಜನಾ ಕಚೇರಿ ಹೊಂದಿರುವ ಕಟ್ಟಡಗಳ ಮಧ್ಯೆ ಹಾದುಹೋಗುತ್ತಿರುವ ರಸ್ತೆ ಶಿಥಿಲಾವಸ್ಥೆಯಲ್ಲಿದ್ದರೂ, ಉಭಯ ಇಲಾಖೆಗಳೂ ಈ ಬಗ್ಗೆ ಚಕಾರವೆತ್ತುತ್ತಿಲ್ಲ. ಇನ್ನು ಸಿವಿಲ್‍ಸ್ಟೇಶನ್ ಕಟ್ಟಡದ ಹಿಂಭಾಗ ಸಂಪೂರ್ಣ ತ್ಯಾಜ್ಯಮಯವಾಗಿದೆ. ಒಂದೆಡೆ ಆರ್‍ಟಿಓ ಹಾಗೂ ಇನ್ನೊಂದೆಡೆ ಪೊಲೀಸರು ವಿವಿಧ ಪ್ರಕರಣಗಳಿಗೆ ಸಂಬಂಧಿಸಿ ವಶಪಡಿಸಿಕೊಂಡಿರುವ ವಾಹನಗಳು ತುಕ್ಕುಹಿಡಿದು ಶಿಥಿಲಾವಸ್ಥೆ ತಲುಪಿಪಿದ್ದರೆ, ಈ ವಾಹನಗಳಿಗೆ ಕಾಡುಬೆಳೆದು, ಮಳೆಗಾಲದಲ್ಲಂತೂ ಸೊಳ್ಳೆ ದಾಸ್ತಾನು ಕೇಂದ್ರಗಳಾಗಿ ಬದಲಾಗುತ್ತಿದೆ.


         ಸಿವಿಲ್‍ಸ್ಟೇಶನ್ ಸುತ್ತು ಹತ್ತು ಹಲವು ಇಲಾಖೆಗಳ ಹಳೇ ವಾಹನಗಳನ್ನೂ ವಿಲೇವಾರಿ ಮಾಡದೆ, ಕಿಲುಬು ಹಿಡಿದು ವಿನಾಶದಂಚಿನಲ್ಲಿದೆ. ಇಂತಹ ವಾಹನಗಳನ್ನು ಕಾಲಾಕಾಲಕ್ಕೆ ಸ್ಕ್ರ್ಯಾಪ್‍ಗಾಗಿ ವಿಲೇವಾರಿ ನಡೆಸಿದಲ್ಲಿ ಆಯಾ ಇಲಾಖೆಗೆ ಒಂದಷ್ಟು ಲಾಭ ಲಭಿಸುವುದರ ಜತೆಗೆ ಸಿವಿಲ್ ಸ್ಟೇಶನ್ ವಠಾರ ತ್ಯಾಜ್ಯದ ಗುಡಾರವಾಗುತ್ತಿರುವುದನ್ನು ತಪ್ಪಿಸಲು ಸಾಧ್ಯವಾಗಲಿದೆ ಎಂಬುದಾಗಿ ಕೆಲವು ಅಧಿಕಾರಿಗಳು ತಿಳಿಸುತ್ತಾರೆ. ಜಿಲ್ಲಾಧಿಕಾರಿ ಸೇರಿದಂತೆ ಉನ್ನತ ಅಧಿಕಾರಿಗಳ ಕಚೇರಿ ಕಾರ್ಯಾಚರಿಸುತ್ತಿರುವ ಸಿವಿಲ್‍ಸ್ಟೇಶನ್ ರಸ್ತೆಗಳೂ ಶಿಥಿಲಾವಸ್ಥೆಯಲ್ಲಿದೆ. ಡಾಂಬಾರು ಕಿತ್ತುಕೊಂಡು ವಾಹನ ಸಂಚಾರ ದುಸ್ತರವೆನಿಸಿದೆ. ಇನ್ನು ಸಿವಿಲ್ ಸ್ಟೇಶನ್ ವಠಾರದಲ್ಲಿ ಶುಚೀಕರಣ ಕಾರ್ಯವೂ ಸಮರ್ಪಕವಾಗಿ ನಡೆಯುತ್ತಿಲ್ಲ. ಕಾಟಾಚಾರಕ್ಕಷ್ಟೆ ಸಿವಿಲ್‍ಸ್ಟೇಶನ್ ವಠಾರದಲ್ಲಿ ಶುಚೀಕರಣ ಕಾರ್ಯ ನಡೆಯುತ್ತಿದೆ. ಜಿಲ್ಲಾಧಿಕಾರಿ ಕಚೇರಿ ವಠಾರದಲ್ಲೇ ತ್ಯಾಜ್ಯ ವಿಲೇವಾರಿಗೆ ಇಷ್ಟೊಂದು ನಿರ್ಲಕ್ಷ್ಯ ವಹಿಸಿದಲ್ಲಿ, ನಗರದ ಇನ್ನುಳಿದ ಪ್ರದೇಶವನ್ನು ಊಹಿಸಲೂ ಸಾಧ್ಯವಾಗದ ಪರಿಸ್ಥಿತಿಯಿದೆ.

ಕ್ಯಾಂಟೀನ್ ಸುತ್ತು ತರಗೆಲೆ:

ಜಿಲ್ಲಾಧಿಕಾರಿ ಕಚೇರಿಯ ಬಹುತೇಕ ಮಂದಿ ಆಹಾರ ಸೇವನೆಗೆ ಆಶ್ರಯಿಸುತ್ತಿರುವ ಕ್ಯಾಂಟೀನ್ ಸುತ್ತು ಶುಚೀಕರಣ ಕಾಣದೆ, ವ್ಯಾಪಕವಾಗಿ ತರಗೆಲೆ ತುಂಬಿಕೊಂಡಿದೆ. ಇನ್ನು ಕ್ಯಾಂಟೀನ್ ಕಡೆ ತೆರಳುವ ರಸ್ತೆಯೂ ಡಾಂಬಾರು ಕಾಣದೆ ಶಿಥಿಲಾವಸ್ಥೆಯಲ್ಲಿದೆ. ನೂರಾರು ಮಂದಿ ಅಧಿಕಾರಿಗಳು, ಸಾರ್ವಜನಿಕರು ಆಹಾರಸೇವನೆಗೆ ಆಶ್ರಯಿಸುತ್ತಿರುವ ಈ ಕ್ಯಾಂಟೀನ್ ಸ್ಥಿತಿ ತೀರಾ ಶೋಚನೀಯಾವಸ್ಥೆಯಲ್ಲಿದೆ. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries