ನವದೆಹಲಿ: ಲೋಕಸಭೆ ಸಭಾಧ್ಯಕ್ಷ ಓಂ ಬಿರ್ಲಾ ಅವರು ತುರ್ತು ಪರಿಸ್ಥಿತಿ ಕುರಿತು ಸದನದಲ್ಲಿ ಮಾತನಾಡಿದ್ದರ ಬಗ್ಗೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹೇಳಿದ್ದಾರೆ.
ರಾಹುಲ್ ಅವರು ಲೋಕಸಭೆ ವಿರೋಧ ಪಕ್ಷದ ನಾಯಕನಾದ ಬಳಿಕ ಮೊದಲ ಬಾರಿಗೆ ಇಂದು (ಗುರುವಾರ) ಸಭಾಧ್ಯಕ್ಷರನ್ನು ಭೇಟಿ ಮಾಡಿದರು. ಸಭಾಧ್ಯಕ್ಷರು ತುರ್ತು ಪರಿಸ್ಥಿತಿ ಬಗ್ಗೆ ಸದನದಲ್ಲಿ ನೀಡಿದ ಹೇಳಿಕೆಯು ರಾಜಕೀಯ ಪ್ರೇರಿತವಾಗಿತ್ತು. ಅದನ್ನು ತಪ್ಪಿಸಬಹುದಿತ್ತು ಎಂದು ಭೇಟಿ ವೇಳೆ ಹೇಳಿದರು ಎಂದು ವೇಣುಗೋಪಾಲ್ ತಿಳಿಸಿದ್ದಾರೆ.
'ತಮ್ಮನ್ನು ವಿರೋಧ ಪಕ್ಷದ ನಾಯಕರನ್ನಾಗಿ ಸಭಾಧ್ಯಕ್ಷರು ಘೋಷಿಸಿದ ನಂತರ ರಾಹುಲ್ ಅವರು ಇಂಡಿಯಾ ಮೈತ್ರಿಕೂಟದ ಇತರ ನಾಯಕರೊಂದಿಗೆ ತೆರಳಿ ಸಭಾಧ್ಯಕ್ಷರನ್ನು ಭೇಟಿಯಾದರು. ಈ ಭೇಟಿಯು ಸೌಜನ್ಯಯುತವಾಗಿತ್ತು' ಎಂದು ವೇಣುಗೋಪಾಲ್ ಹೇಳಿದ್ದಾರೆ.
ಭೇಟಿ ವೇಳೆ ತುರ್ತು ಪರಿಸ್ಥಿತಿ ವಿಚಾರವಾಗಿ ಚರ್ಚೆ ನಡೆಯಿತೇ ಎಂದು ಮಾಧ್ಯಮದವರು ಕೇಳಿದ್ದಕ್ಕೆ ಪ್ರತಿಕ್ರಿಯಿಸಿದ ವೇಣುಗೋಪಾಲ್, 'ಸಂಸತ್ತಿನ ಕಾರ್ಯಾಚರಣೆಯೂ ಸೇರಿದಂತೆ ಸಾಕಷ್ಟು ವಿಚಾರಗಳನ್ನು ಚರ್ಚಿಸಿದೆವು. ಆಗ ಈ (ತುರ್ತು ಪರಿಸ್ಥಿತಿ) ವಿಚಾರವನ್ನೂ ಚರ್ಚಿಸಲಾಯಿತು. ಸಭಾಧ್ಯಕ್ಷರು ಸದನವನ್ನು ಉದ್ದೇಶಿಸಿ ಮಾತನಾಡುವಾಗ ಈ ವಿಚಾರ ಪ್ರಸ್ತಾಪಿಸುವುದನ್ನು ತಪ್ಪಿಸಬಹುದಿತ್ತು. ಅದು ಸಂಪೂರ್ಣ ರಾಜಕೀಯ ಪ್ರೇರಿತವಾಗಿತ್ತು ಎಂಬುದಾಗಿ ರಾಹುಲ್ ಅವರು ವಿರೋಧ ಪಕ್ಷದ ನಾಯಕನಾಗಿ ಮನವರಿಕೆ ಮಾಡಿದ್ದಾರೆ' ಎಂದೂ ತಿಳಿಸಿದ್ದಾರೆ.
ಸಮಾಜವಾಧಿ ಪಕ್ಷದ ನಾಯಕ ಧರ್ಮೇಂದ್ರ ಯಾದವ್, ಡಿಎಂಕೆಯ ಕನಿಮೋಳಿ, ಶರದ್ ಪವಾರ್ ಬಣದ ಎನ್‌ಸಿಪಿಯ ಸುಪ್ರಿಯಾ ಸುಳೆ, ಟಿಎಂಸಿಯ ಕಲ್ಯಾಣ್ ಬ್ಯಾನರ್ಜಿ ಅವರು ರಾಹುಲ್ ಗಾಂಧಿ ಅವರೊಂದಿಗೆ ಸಭಾಧ್ಯಕ್ಷರನ್ನು ಭೇಟಿಯಾದರು.
ಲೋಕಸಭೆ ಸ್ಪೀಕರ್ ಆಗಿ ಸತತ ಎರಡನೇ ಅವಧಿಗೆ ಬುಧವಾರ ಆಯ್ಕೆಯಾದ ನಂತರ ಬಿರ್ಲಾ ಅವರು, ತುರ್ತು ಪರಿಸ್ಥಿತಿಯನ್ನು ಖಂಡಿಸುವ ನಿರ್ಣಯವನ್ನು ಸದನದಲ್ಲಿ ಓದಿದರು. ಈ ವೇಳೆ ಕಾಂಗ್ರೆಸ್ ಸಂಸದರು ಸದನದಲ್ಲೇ ಪ್ರತಿಭಟಿಸಿದರು.
ಆಗಿನ ಪ್ರಧಾನಿ ಇಂದಿರಾ ಗಾಂಧಿ ನೇತೃತ್ವದ ಸರ್ಕಾರ 1975ರ ಜೂನ್ 26ರಂದು ದೇಶದಾದ್ಯಂತ ತುರ್ತು ಪರಿಸ್ಥಿತಿ ಹೇರಿಕೆ ಮಾಡಿತ್ತು.