ನವದೆಹಲಿ: ಭಾರಿ ಮಳೆಯಿಂದಾಗಿ ದೆಹಲಿಯ ಸಿರಸ್‌ಪುರ ಅಂಡರ್ ಪಾಸ್‌ನಲ್ಲಿ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೆಟ್ರೊ ನಿಲ್ದಾಣ ಸಮೀಪ ಸಿರಸ್‌ಪುರ ಅಂಡರ್‌ಪಾಸ್ ಬಳಿ ಈ ಘಟನೆ ನಡೆದಿದೆ.
ಸುಮಾರು 3 ಅಡಿಗಳಷ್ಟು ನೀರು ಸಂಗ್ರಹಗೊಂಡಿದ್ದು, ಬಾಲಕರು ಆ ನೀರಿನಲ್ಲಿ ಆಟವಾಡುತ್ತಿರುವಾಗ ಮುಳುಗಿ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಇಂದು ಮಧ್ಯಾಹ್ನ 2.55ಕ್ಕೆ ಬಾಲಕರು ನೀರಿನಲ್ಲಿ ಮುಳುಗಿರುವ ಕುರಿತು ಮಾಹಿತಿ ಬಂದಿತ್ತು. ತಕ್ಷಣವೇ ಅಗ್ನಿಶಾಮಕ ಸಿಬ್ಬಂದಿಯೊಂದಿಗೆ ಪೊಲೀಸರು ಸ್ಥಳಕ್ಕೆ ಧಾವಿಸಿ, ಶೋಧ ಕಾರ್ಯಾಚರಣೆ ನಡೆಸಿ ಮೃತದೇಹಗಳನ್ನು ಹೊರತೆಗೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತರ ಪೈಕಿ ಓರ್ವ ಬಾಲಕನನ್ನು ಸಿರಸ್‌ಪುರ ನಿವಾಸಿ ಎಂದು ಗುರುತಿಸಲಾಗಿದ್ದು, ಮತ್ತೋರ್ವನ ಗುರುತು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.