ನವದೆಹಲಿ: ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲಿ 2024ರಲ್ಲಿ ಭಾರತವು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಉಳಿಯುವ ನಿರೀಕ್ಷೆಯಿದೆ ಎಂದು ರೇಟಿಂಗ್ ಏಜೆನ್ಸಿ ಮೂಡೀಸ್ ಹೇಳಿದೆ.
ಇಂಡೋನೇಷ್ಯಾ, ಫಿಲಿಪೈನ್ಸ್ ಮತ್ತು ಭಾರತವು 2024ರ ಮೊದಲಾರ್ಧದಲ್ಲಿ ಬೆಳವಣಿಗೆಯನ್ನು ಮುನ್ನಡೆಸಿವೆ ಎಂದು ಜೂನ್ 13ರಂದು ಬಿಡುಗಡೆಯಾದ 'ಕ್ರೆಡಿಟ್ ಕಂಡೀಶನ್ಸ್ - ಏಷ್ಯಾ-ಪೆಸಿಫಿಕ್ ಎಚ್2 2024 ಕ್ರೆಡಿಟ್ ಔಟ್‌ಲುಕ್' ಎಂಬ ಶೀರ್ಷಿಕೆಯ ತನ್ನ ವರದಿಯಲ್ಲಿ ಮೂಡೀಸ್ ಹೇಳಿದೆ.
ಹೆಚ್ಚುತ್ತಿರುವ ರಫ್ತುಗಳು, ಬಲವಾದ ಸ್ಥಳೀಯ ಬೇಡಿಕೆ ಮತ್ತು ಮೂಲಸೌಕರ್ಯ ಯೋಜನೆಗಳ ಮೇಲೆ ಗಣನೀಯ ಪ್ರಮಾಣದ ಸರ್ಕಾರಿ ಖರ್ಚು ಕಾರಣಗಳಿಂದಾಗಿ ಈ ದೇಶಗಳು ಕೋವಿಡ್ ಪೂರ್ವ ಬೆಳವಣಿಗೆಯ ಮಟ್ಟಗಳಿಗೆ ಹೋಲಿಸಿದರೆ ಉತ್ತಮವಾಗಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸಲು ನಿರೀಕ್ಷಿಸಲಾಗಿದೆ.
'ಭಾರತವು ಈ ಪ್ರದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಉಳಿಯುತ್ತದೆ. ಕಳೆದ ವರ್ಷದ ದೇಶೀಯವಾಗಿ ಚಾಲಿತ ಆವೇಗವನ್ನು ಉಳಿಸಿಕೊಳ್ಳುತ್ತದೆ. ಸಾರ್ವತ್ರಿಕ ಚುನಾವಣೆಯ ನಂತರ ನಾವು ನೀತಿ ಮುಂದುವರಿಕೆಯನ್ನು ನಿರೀಕ್ಷಿಸುತ್ತೇವೆ. ಮೂಲಸೌಕರ್ಯ ಅಭಿವೃದ್ಧಿ ಮತ್ತು ಖಾಸಗಿ ವಲಯದ ಹೂಡಿಕೆಯ ಉತ್ತೇಜನದ ಮೇಲೆ ನಿರಂತರ ಗಮನಹರಿಸಬಹುದಾಗಿದೆ' ಎಂದು ವರದಿ ಹೇಳಿದೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆಯು 6.6% ರಷ್ಟು ಬೆಳವಣಿಗೆಯಾಗಲಿದೆ ಎಂದು ಮೂಡೀಸ್ ರೇಟಿಂಗ್ಸ್ ಕಳೆದ ತಿಂಗಳು ಮುನ್ಸೂಚನೆ ನೀಡಿತ್ತು.
ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ. 7ರಷ್ಟು ಪ್ರಗತಿ ದರ ನಿರೀಕ್ಷಿಸಿವೆ. ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ ಮತ್ತು ಫಿಚ್ ರೇಟಿಂಗ್‌ಗಳು ಸಹ 7% ಬೆಳವಣಿಗೆ ಅಂದಾಜಿಸಿದ್ದರೆ, ಎಸ್ ಆಯಂಡ್ ಪಿ ಗ್ಲೋಬಲ್ ರೇಟಿಂಗ್ಸ್ ಮತ್ತು ಮೋರ್ಗಾನ್ ಸ್ಟಾನ್ಲಿ 6.8% ಬೆಳವಣಿಗೆ ದರ ನಿರೀಕ್ಷಿಸಿವೆ.