ಲಖನೌ: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ವಾರಾಣಸಿ ಕ್ಷೇತ್ರದಿಂದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸ್ಪರ್ಧಿಸಬೇಕು ಎಂದು ಬಯಸಿದ್ದೆವು ಎಂದು ಉತ್ತರ ಪ್ರದೇಶದ ಕಾಂಗ್ರೆಸ್ ಘಟಕದ ಅಧ್ಯಕ್ಷ ಅಜಯ್ ರಾಯ್ ಬುಧವಾರ ತಿಳಿಸಿದ್ದಾರೆ.

'ವಾರಾಣಸಿಯಲ್ಲಿ ಮೋದಿ ವಿರುದ್ಧ ಪ್ರಿಯಾಂಕಾ ಸ್ಪರ್ಧಿಸಬೇಕೆಂದು ನಾವು ಬಯಸಿದ್ದೆವು. ಆದರೆ ಚುನಾವಣೆ ಸಂದರ್ಭದಲ್ಲಿ ಪ್ರಿಯಾಂಕಾ ದೇಶದಾದ್ಯಂತ ಪ್ರಚಾರ ನಡೆಸಬೇಕೆಂದು ಪಕ್ಷವು ಬಯಸಿತ್ತು' ಎಂದು ಅವರು ಹೇಳಿದ್ದಾರೆ.
ವಾರಾಣಸಿ ಲೋಕಸಭಾ ಕ್ಷೇತ್ರದಲ್ಲಿ ನರೇಂದ್ರ ಮೋದಿ ಗೆದ್ದರೂ ಬಹುಮತದಲ್ಲಿ ಭಾರಿ ಇಳಿಕೆ ಕಂಡುಬಂದಿತ್ತು. 2014 ಹಾಗೂ 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನಿ ಮೋದಿ ಅನುಕ್ರಮವಾಗಿ 4,79,505 ಹಾಗೂ 3,71,784 ಮತಗಳ ಅಂತರದ ಜಯ ಗಳಿಸಿದ್ದರು. ಆದರೆ ಈ ಬಾರಿ ಗೆಲುವಿನ ಅಂತರ 1,52,513 ಮತಗಳಿಗೆ ಕುಗ್ಗಿತ್ತು.
ಪ್ರಧಾನಿ ವಿರುದ್ಧ ಪ್ರಿಯಾಂಕಾ ಜಯ ಗಳಿಸುತ್ತಿದ್ದರು: ರಾಹುಲ್ ಗಾಂಧಿ
ಒಂದು ವೇಳೆ ವಾರಾಣಸಿ ಲೋಕಸಭಾ ಕ್ಷೇತ್ರದಲ್ಲಿ ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕಾ ಸ್ಪರ್ಧಿಸಿದ್ದರೆ ಜಯ ಗಳಿಸುತ್ತಿದ್ದರು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ಹೇಳಿಕೆ ನೀಡಿದ್ದರು.
'ಅಯೋಧ್ಯೆ ಮಾತ್ರವಲ್ಲದೆ ವಾರಾಣಸಿಯಲ್ಲೂ ಪ್ರಧಾನಿ ಮೋದಿ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಸಹೋದರಿ ಪ್ರಿಯಾಂಕಾ ವಾರಾಣಸಿಯಲ್ಲಿ ಸ್ಪರ್ಧಿಸಿದ್ದರೆ ಮೋದಿಗೆ ಎರಡರಿಂದ ಮೂರು ಲಕ್ಷಗಳ ಅಂತರದ ಸೋಲು ಎದುರಾಗುತ್ತಿತ್ತು' ಎಂದು ಅವರು ಹೇಳಿದ್ದರು.