ತಿರುವನಂತಪುರಂ: ವಯನಾಡ್ ಜಿಲ್ಲೆಯಲ್ಲಿನ ಸರಕಾರಿ ಶಾಲೆಯಲ್ಲಿ ರ‍್ಯಾಗಿಂಗ್ ನಡೆದಿದೆ ಎಂದು ವಿದ್ಯಾರ್ಥಿಯೊಬ್ಬ ನೀಡಿರುವ ದೂರನ್ನು ಆಧರಿಸಿ ಕೇರಳ ಸರಕಾರವು ಶನಿವಾರ ತನಿಖೆಗೆ ಆದೇಶಿಸಿದೆ ಎಂದು ವರದಿಯಾಗಿದೆ.
ನನ್ನ ಸಹಪಾಠಿಗಳು ಕತ್ತರಿಯಿಂದ ನನ್ನ ಮೇಲೆ ಭೀಕರವಾಗಿ ಹಲ್ಲೆ ನಡೆಸಿ, ಗಾಯಗೊಳಿಸಿದ್ದಾರೆ ಎಂದು 10ನೇ ತರಗತಿಯ ವಿದ್ಯಾರ್ಥಿ ದೂರಿದ್ದಾನೆ.
ಈ ಘಟನೆಯ ನಂತರ, ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಡೆದಿದೆಯೆನ್ನಲಾದ ಘಟನೆಯ ಕುರಿತು ಇಲಾಖಾ ತನಿಖೆ ನಡೆಸಿ, ಈ ಕುರಿತು ವರದಿಯೊಂದನ್ನು ಸಲ್ಲಿಸುವಂತೆ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕಿ ಎ.ಅಬೂಬ್ಕರ್ ಅವರಿಗೆ ಶಿಕ್ಷಣ ಸಚಿವ ವಿ.ಶಿವನ್ ಕುಟ್ಟಿ ನಿರ್ದೇಶಿಸಿದ್ದಾರೆ.
ಇದರೊಂದಿಗೆ, ಘಟನೆ ನಡೆದ ಶಾಲೆಗೆ ತೆರಳಿ, ಸಂತ್ರಸ್ತ ವಿದ್ಯಾರ್ಥಿ ಹಾಗೂ ಆತನ ಪೋಷಕರನ್ನೂ ಭೇಟಿ ಮಾಡುವಂತೆ ವಯನಾಡ್ ನ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೂ ಸಚಿವರು ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಸಚಿವ ಶಿವನ್ ಕುಟ್ಟಿ ಅವರು ವಯನಾಡ್ ಪೊಲೀಸ್ ವರಿಷ್ಠಾಧಿಕಾರಿಯೊಂದಿಗೆ ಈ ಕುರಿತು ಚರ್ಚಿಸಿದ್ದು, ವಿದ್ಯಾರ್ಥಿಯ ತಾಯಿ ಹಾಗೂ ಪೋಷಕರು ಮತ್ತು ಶಿಕ್ಷಕರ ಒಕ್ಕೂಟದ ಅಧ್ಯಕ್ಷರೊಂದಿಗೂ ದೂರವಾಣಿ ಕರೆ ಮಾಡಿ ಮಾತನಾಡಿದ್ದಾರೆ ಎಂದು ಸಚಿವರ ಕಚೇರಿಯು ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಶಾಲೆಗಳ ಆವರಣಗಳಲ್ಲಿ ಯಾವುದೇ ಕಾರಣಕ್ಕೂ ರ‍್ಯಾಗಿಂಗ್ ಗೆ ಅವಕಾಶ ನೀಡುವುದಿಲ್ಲವೆಂದೂ ಸಚಿವರು ಸ್ಪಷ್ಟಪಡಿಸಿದ್ದಾರೆ.