HEALTH TIPS

ವರ್ಷಕ್ಕೆ ಎರಡು ಬಾರಿ ಪ್ರವೇಶ: ವಿ.ವಿಗಳಿಗೆ ಯುಜಿಸಿ ಅವಕಾಶ

          ವದೆಹಲಿ: ವಿದೇಶಿ ವಿಶ್ವವಿದ್ಯಾಲಯಗಳ ರೀತಿಯಲ್ಲಿಯೇ ಭಾರತೀಯ ವಿಶ್ವವಿದ್ಯಾಲಯಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ವರ್ಷಕ್ಕೆ ಎರಡು ಬಾರಿ ಪ್ರವೇಶ ಪ್ರಕ್ರಿಯೆ ಕೈಗೊಳ್ಳಲು ಅನುಮತಿ ನೀಡಲಾಗುವುದು ಎಂದು ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಅಧ್ಯಕ್ಷ ಎಂ.ಜಗದೀಶ್‌ ಕುಮಾರ್‌ ತಿಳಿಸಿದ್ದಾರೆ.

           ಇದನ್ನು 2024-25ನೇ ಸಾಲಿನಿಂದಲೇ ಜಾರಿಗೆ ತರಲಾಗುವುದು. ಮೊದಲ ಸುತ್ತಿನ ಪ್ರವೇಶವು ಜುಲೈ- ಆಗಸ್ಟ್‌ನಲ್ಲಿ ಮತ್ತು ಎರಡನೇ ಸುತ್ತಿನ ಪ್ರವೇಶ ಪ್ರಕ್ರಿಯೆ ಜನವರಿ-ಫೆಬ್ರುವರಿಯಲ್ಲಿ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಆದಾಗ್ಯೂ, ವಿಶ್ವವಿದ್ಯಾಲಯ ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಇದು ಕಡ್ಡಾಯವಲ್ಲ, ಆದರೆ ಅಳವಡಿಸಿಕೊಂಡರೆ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗುತ್ತದೆ ಎಂದು ಅವರು ವಿವರಿಸಿದ್ದಾರೆ.

              ಈ ಕುರಿತು ಯುಜಿಸಿ ಅಧ್ಯಕ್ಷರು ಪಿಟಿಐ ಸುದ್ದಿ ಸಂಸ್ಥೆಗೆ ನೀಡಿರುವ ಮಾಹಿತಿ ಇಲ್ಲಿದೆ.

* ವಿವಿಧ ಮಂಡಳಿಗಳಿಂದ ಫಲಿತಾಂಶ ಪ್ರಕಟಣೆಯಲ್ಲಿ ಆಗುವ ವಿಳಂಬ, ಆರೋಗ್ಯ ಸಮಸ್ಯೆ ಅಥವಾ ಇತರ ವೈಯಕ್ತಿಕ ಕಾರಣಗಳಿಂದ ಮೊದಲ ಸುತ್ತಿನಲ್ಲಿ (ಜುಲೈ-ಆಗಸ್ಟ್‌) ಪ್ರವೇಶ ಪಡೆಯಲು ಆಗದ ಅನೇಕ ವಿದ್ಯಾರ್ಥಿಗಳಿಗೆ ಎರಡನೇ ಸುತ್ತಿನ ಪ್ರವೇಶ ಪ್ರಕ್ರಿಯೆಯು (ಜನವರಿ-ಫೆಬ್ರುವರಿ) ಪ್ರಯೋಜನವಾಗುತ್ತದೆ. ಇದರಿಂದ ಆರಂಭದಲ್ಲಿ ಪ್ರವೇಶ ಪಡೆಯಲಾಗದ ವಿದ್ಯಾರ್ಥಿಗಳು ಪದವಿ ಕೋರ್ಸ್‌ನ ಪ್ರವೇಶಕ್ಕಾಗಿ ಒಂದು ವರ್ಷ ಕಾಯುವುದು ತಪ್ಪುತ್ತದೆ

* ಉದ್ಯಮಗಳಿಗೆ ವರ್ಷಕ್ಕೆ ಎರಡು ಬಾರಿ ಕ್ಯಾಂಪಸ್‌ ನೇಮಕಾತಿಗಳನ್ನು ಮಾಡಿಕೊಳ್ಳಲು ಅವಕಾಶ ದೊರೆಯುತ್ತದೆ. ಇದರಿಂದ ಪದವೀಧರರಿಗೆ ಉದ್ಯೋಗಾವಕಾಶಗಳೂ ಹೆಚ್ಚುತ್ತವೆ

* ಉನ್ನತ ಶಿಕ್ಷಣ ಸಂಸ್ಥೆಗಳು ತಮ್ಮ ಸಂಪನ್ಮೂಲಗಳಾದ ಅಧ್ಯಾಪಕರು, ಪ್ರಯೋಗಾಲಯ, ತರಗತಿ ಕೊಠಡಿಗಳು ಮತ್ತು ಇತರ ಪೂರಕ ಸೇವೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಸದ್ಬಳಕೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ವಿಶ್ವವಿದ್ಯಾಲಯಗಳು ಇನ್ನಷ್ಟು ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುತ್ತವೆ

* ಜಗತ್ತಿನಾದ್ಯಂತ ಬಹುತೇಕ ವಿಶ್ವವಿದ್ಯಾಲಯಗಳು ವರ್ಷಕ್ಕೆ ಎರಡು ಬಾರಿ ಪ್ರವೇಶ ಪ್ರಕ್ರಿಯೆ ವ್ಯವಸ್ಥೆಯನ್ನು ಈಗಾಗಲೇ ಅನುಸರಿಸುತ್ತಿವೆ. ಭಾರತೀಯ ಉನ್ನತ ಶಿಕ್ಷಣ ಸಂಸ್ಥೆಗಳು ಈ ಮಾದರಿಯನ್ನು ಅಳವಡಿಸಿಕೊಂಡರೆ ಜಾಗತಿಕ ಮಟ್ಟದಲ್ಲಿ ಅನುಕೂಲಗಳಾಗುತ್ತವೆ

* ಅಂತರರಾಷ್ಟ್ರೀಯ ಸಹಯೋಗ ಮತ್ತು ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮಗಳನ್ನು ಹೆಚ್ಚಿಸಲು ಇದು ಪೂರಕವಾಗಿದೆ. ಅಲ್ಲದೆ ಇದರಿಂದ ನಮ್ಮ ಸಂಸ್ಥೆಗಳ ಜಾಗತಿಕ ಸ್ಪರ್ಧಾತ್ಮಕತೆಯೂ ಸುಧಾರಿಸುತ್ತದೆ. ಜತೆಗೆ ಜಾಗತಿಕ ಶೈಕ್ಷಣಿಕ ಮಾನದಂಡಗಳನ್ನೂ ಪಾಲಿಸಿದಂತಾಗುತ್ತದೆ

* ವರ್ಷಕ್ಕೆ ಎರಡು ಬಾರಿ ಪ್ರವೇಶ ಪ್ರಕ್ರಿಯೆ ನಡೆಸುವುದು ವಿಶ್ವವಿದ್ಯಾಲಯ ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಕಡ್ಡಾಯವೇನಲ್ಲ. ಇದಕ್ಕೆ ಅಗತ್ಯವಿರುವಷ್ಟು ಅಧ್ಯಾಪಕರು, ಮೂಲಸೌಕರ್ಯ ಹೊಂದಿರುವ ಉನ್ನತ ಶಿಕ್ಷಣ ಸಂಸ್ಥೆಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು

* ಇದು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಪ್ರವೇಶವನ್ನು ಹೆಚ್ಚಿಸಲು ಮತ್ತು ಉದಯೋನ್ಮುಖ ಕ್ಷೇತ್ರಗಳಲ್ಲಿ ಹೊಸ ಕೋರ್ಸ್‌ಗಳನ್ನು ಪರಿಚಯಿಸಲು ಅವಕಾಶ ಕಲ್ಪಿಸುತ್ತದೆ. ಇದನ್ನು ಅಳವಡಿಸಿಕೊಳ್ಳಲು ಉನ್ನತ ಶಿಕ್ಷಣ ಸಂಸ್ಥೆಗಳು ತಮ್ಮ ಸಾಂಸ್ಥಿಕ ನಿಯಮಗಳಿಗೆ ಸೂಕ್ತ ತಿದ್ದುಪಡಿಗಳನ್ನು ತರಬೇಕಾಗುತ್ತದೆ

'ಯೋಜನೆ ರೂಪಿಸಲು ಸಜ್ಜಾಗಬೇಕು'

           ಪ್ರಸ್ತುತ ವಿಶ್ವವಿದ್ಯಾಲಯ ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರತಿ ವರ್ಷ ಜುಲೈ-ಆಗಸ್ಟ್‌ನಲ್ಲಿ ಪ್ರವೇಶ ಪ್ರಕ್ರಿಯೆಗಳು ನಡೆಯುತ್ತವೆ. ಹೀಗಾಗಿ ಶೈಕ್ಷಣಿಕ ವರ್ಷ ಜುಲೈ- ಆಗಸ್ಟ್‌ನಲ್ಲಿ ಆರಂಭವಾಗಿ ಮೇ- ಜೂನ್‌ನಲ್ಲಿ ಕೊನೆಗೊಳ್ಳುತ್ತದೆ. ವರ್ಷಕ್ಕೆ ಎರಡು ಬಾರಿ ಪ್ರವೇಶಕ್ಕೆ ಅವಕಾಶ ಕಲ್ಪಿಸಿದರೆ ಅದಕ್ಕೆ ಪೂರಕವಾಗಿ ಯೋಜನೆಗಳನ್ನು ರೂಪಿಸಿಕೊಂಡು ಸರ್ವರೀತಿಯಲ್ಲೂ ಸಜ್ಜಾಗಬೇಕಾದದ್ದು ವಿ.ವಿ ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳ ಕರ್ತವ್ಯ ಎಂದು ಯುಜಿಸಿ ಅಧ್ಯಕ್ಷ ಜಗದೀಶ್‌ ಕುಮಾರ್‌ ವಿವರಿಸಿದ್ದಾರೆ. ಅಲ್ಲದೆ ಈ ಸಂಬಂಧ ಎದುರಾಗಬಹುದಾದ ಸವಾಲು ಅರಿತು ಅದಕ್ಕೆ ತಕ್ಕಂತೆ ಯೋಜನೆ ರೂಪಿಸಿಕೊಳ್ಳಬೇಕು. ಆಡಳಿತಾತ್ಮಕ ಜಟಿಲತೆಗಳ ಮೇಲೆ ಹೆಚ್ಚು ಕೆಲಸ ಮಾಡಬೇಕು. ಲಭ್ಯವಿರುವ ಸಂಪನ್ಮೂಲಗಳನ್ನು ಇನ್ನಷ್ಟು ಸಮರ್ಪಕ ಬಳಸಿಕೊಳ್ಳಲು ಕಾರ್ಯತಂತ್ರ ರೂಪಿಸಬೇಕು. ವರ್ಷದ ವಿಭಿನ್ನ ಸಮಯಗಳಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆ ಅಡೆ-ತಡೆ ಆಗದಂತೆ ವ್ಯವಸ್ಥೆಗಳನ್ನು ಎಚ್ಚರದಿಂದ ನಿರ್ವಹಿಸಬೇಕು. ಈ ಕುರಿತ ವ್ಯವಸ್ಥೆಯ ಪರಿವರ್ತನೆಗೆ ವಿದ್ಯಾರ್ಥಿಗಳು ಅಧ್ಯಾಪಕರು ಸಿಬ್ಬಂದಿಯನ್ನು ಸರಿಯಾಗಿ ಸಿದ್ಧಪಡಿಸಿದಾಗ ಮಾತ್ರ ಇದರ ಉಪಯುಕ್ತತೆ ಹೆಚ್ಚುತ್ತದೆ ಎಂದಿದ್ದಾರೆ.

ಒಡಿಎಲ್‌ ಆನ್‌ಲೈನ್‌ ಕೋರ್ಸ್‌ಗಳಿಗೆ ಅನುಷ್ಠಾನ

              ಮುಕ್ತ ಮತ್ತು ದೂರಶಿಕ್ಷಣ (ಒಡಿಎಲ್‌) ಹಾಗೂ ಆನ್‌ಲೈನ್‌ ಕೋರ್ಸ್‌ಗಳಿಗೆ ವರ್ಷಕ್ಕೆ ಎರಡು ಬಾರಿ (ಜುಲೈ ಮತ್ತು ಜನವರಿ) ಪ್ರವೇಶಕ್ಕೆ ಯುಜಿಸಿ ಈಗಾಗಲೇ ಅವಕಾಶ ಮಾಡಿಕೊಟ್ಟಿದೆ. ಈ ನಿರ್ಧಾರದಿಂದ ಹಿಂದಿನ ಸಾಲಿನಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಪದವಿ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಸಾಧ್ಯವಾಗಿದೆ ಎಂದು ಕುಮಾರ್‌ ವಿವರಿಸಿದ್ದಾರೆ. ಯುಜಿಸಿ ಪೋರ್ಟಲ್‌ನ ಮಾಹಿತಿ ಪ್ರಕಾರ ಒಡಿಎಲ್‌ ಹಾಗೂ ಆನ್‌ಲೈನ್‌ ಕೋರ್ಸ್‌ಗಳಿಗೆ 2022ರ ಜುಲೈನಲ್ಲಿ 19.73 ಲಕ್ಷ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರೆ 2023ರ ಜನವರಿಯಲ್ಲಿ 4.29 ಲಕ್ಷ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ ಎಂದು ಅವರು ಅಂಕಿ ಅಂಶಗಳನ್ನು ನೀಡಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries