ಲಂಡನ್: ತೀವ್ರತರದ ಮೂರ್ಛೆರೋಗದಿಂದ ಬಳಲುತ್ತಿರುವ ಶಾಲಾ ವಿದ್ಯಾರ್ಥಿಯೊಬ್ಬನ ತಲೆಬುರುಡೆಯೊಳಗೆ ಮೂರ್ಛೆಯನ್ನು ನಿಯಂತ್ರಿಸುವ ಸಾಧನವನ್ನು ಬ್ರಿಟನ್‌ನಲ್ಲಿ ಪ್ರಾಯೋಗಿಕವಾಗಿ ಅಳವಡಿಸಲಾಗಿದೆ.
ಪ್ರಪಂಚದಲ್ಲೇ ಇದು ಮೊದಲ ಪ್ರಯತ್ನವಾಗಿದ್ದು, ಓರನ್ ನೋಲ್ಸನ್ ಎಂಬ ಹೆಸರಿನ ಬಾಲಕನು ವೈದ್ಯಕೀಯ ಕ್ಷೇತ್ರದಲ್ಲಿ ಇತಿಹಾಸ ನಿರ್ಮಿಸಿದ್ದಾನೆ ಎಂದು ವರದಿಯೊಂದು ಹೇಳಿದೆ.
ತಲೆಬುರುಡೆಯಲ್ಲಿ ಅಳವಡಿಸಿರುವ ನರಉತ್ತೇಜಕ (ನ್ಯೂರೋಸ್ಟಿಮ್ಯುಲೇಟರ್) ಸಾಧನವು ಮಿದುಳಿಗೆ ವಿದ್ಯುತ್ ಸಂಕೇತಗಳನ್ನು ರವಾನಿಸುತ್ತದೆ. ಇದು ಬಾಲಕ ಹಗಲು ಹೊತ್ತಿನಲ್ಲಿ ಮೂರ್ಛೆಹೋಗುವ ಪ್ರಮಾಣವನ್ನು ಶೇ 80ರಷ್ಟು ಕಡಿಮೆ ಮಾಡಿದೆ.
'ಲೆನ್ನೊಕ್ಸ್-ಗ್ಯಾಸ್ಟೌಟ್ ಸಿಂಡ್ರೋಮ್‌ನಿಂದ (ಎಲ್‌ಜಿಎಸ್) ಓರನ್ ಬಳಲುತ್ತಿದ್ದಾನೆ. ಇದು ಚಿಕಿತ್ಸೆ ಇಲ್ಲದ ತೀವ್ರ ಸ್ವರೂಪದ ಮೂರ್ಛೆರೋಗವಾಗಿದೆ. ಓರನ್ ಮೂರು ವರ್ಷದವನಾಗಿದ್ದಾಗ ಈ ಕಾಯಿಲೆ ಕಂಡು ಬಂದಿತ್ತು. ಅಂದಿನಿಂದ ಪ್ರತಿ ದಿನ ಆತ ಕನಿಷ್ಠ 24ರಿಂದ 100 ಬಾರಿ ಪ್ರಜ್ಞೆ ತಪ್ಪುತ್ತಿದ್ದ' ಎಂದು ಬಿಬಿಸಿ ವರದಿ ಮಾಡಿದೆ.
'ಲಂಡನ್ನಿನ ಗ್ರೇಟ್ ಆರ್ಮಂಡ್ ಸ್ಟ್ರೀಟ್ ಆಸ್ಪತ್ರೆಯಲ್ಲಿ ಲಂಡನ್ ಯೂನಿವರ್ಸಿಟಿ ಕಾಲೇಜು, ಕಿಂಗ್ಸ್ ಕಾಲೇಜು ಆಸ್ಪತ್ರೆ ಮತ್ತು ಆಕ್ಸ್‌ಫರ್ಡ್ ವಿವಿಯ ಸಹಯೋಗದಲ್ಲಿ ಪ್ರಾಯೋಗಿಕವಾಗಿ 2023ರ ಅಕ್ಟೋಬರ್‌ನಲ್ಲಿ ಈ ಶಸ್ತ್ರಕ್ರಿಯೆ ನಡೆಸಲಾಗಿದೆ. ಓರನ್‌ಗೆ ಆಗ 12 ವರ್ಷ ವಯಸ್ಸಾಗಿತ್ತು' ಎಂದು ವರದಿಯಲ್ಲಿ ಹೇಳಲಾಗಿದೆ.
ಚಿಕಿತ್ಸೆ ಯಶಸ್ವಿಯಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಓರನ್ ತಾಯಿ ಜಸ್ಟಿನ್, 'ಓರನ್ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ ಕಂಡು ಬಂದಿದೆ. ಮೂರ್ಛೆ ತಪ್ಪುವುದು ಕಡಿಮೆಯಾಗಿದೆ. ಪ್ರಜ್ಞೆ ತಪ್ಪುವಾಗಿನ ತೀವ್ರತೆಯೂ ಕಡಿಮೆಯಾಗಿದೆ' ಎಂದು ಬಿಬಿಸಿಗೆ ಹೇಳಿದ್ದಾರೆ.