ನವದೆಹಲಿ: ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸುವ ನೀಟ್ ಪರೀಕ್ಷೆಯಲ್ಲಿ ಅಕ್ರಮ ನಡೆದಿದ್ದು, ಮರುಪರೀಕ್ಷೆ ನಡೆಸಬೇಕು ಹಾಗೂ ಸಿಬಿಐ ತನಿಖೆ ನಡೆಸಬೇಕು ಎಂದು ಕೋರಿ ಸಲ್ಲಿಕೆಯಾಗಿರುವ ಅರ್ಜಿಗೆ ಪ್ರತಿಕ್ರಿಯಿಸುವಂತೆ ಕೇಂದ್ರ ಸರ್ಕಾರ ಮತ್ತು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA)ಗೆ ಸುಪ್ರೀಂ ಕೋರ್ಟ್ ಗುರುವಾರ ನೋಟಿಸ್ ನೀಡಿದೆ.
ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ವಿಕ್ರಮನಾಥ್ ಹಾಗೂ ನ್ಯಾ. ಎಸ್‌ವಿಎನ್ ಭಟ್ಟಿ ಅವರಿದ್ದ ರಜಾಕಾಲದ ಪೀಠವು, ನೀಟ್ ಪರೀಕ್ಷೆ ಕುರಿತು ಹೈಕೋರ್ಟ್‌ನಲ್ಲಿ ಸಲ್ಲಿಕೆಯಾದ ಪ್ರತ್ಯೇಕ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ಗೆ ವರ್ಗಾಯಿಸುವ ಕುರಿತು ಎನ್‌ಟಿಎ ಪ್ರತಿಕ್ರಿಯೆ ಸಲ್ಲಿಸುವಂತೆ ನೋಟಿಸ್ ಜಾರಿ ಮಾಡಿತು. ಪಕ್ರರಣದ ವಿಚಾರಣೆಯನ್ನು ಜುಲೈ 8ಕ್ಕೆ ಮುಂದೂಡಿತು.
ಮರು ಪರೀಕ್ಷೆ ನಡೆಸಲು ಎನ್‌ಟಿಎಗೆ ನಿರ್ದೇಶನ ನೀಡಬೇಕು ಎಂದು ಕೋರಿ 20 ವಿದ್ಯಾರ್ಥಿಗಳಿಂದ ಸಲ್ಲಿಕೆಯಾದ ಅರ್ಜಿ ಕುರಿತೂ ಪ್ರತಿಕ್ರಿಯಿಸಿರುವ ಸುಪ್ರೀಂ ಕೋರ್ಟ್, 'ನೀಟ್ ಪರೀಕ್ಷೆಯಲ್ಲಿ ಶೇ 0.001ರಷ್ಟು ನಿರ್ಲಕ್ಷ್ಯ ವಹಿಸಲಾಗಿದ್ದರೂ, ಆ ಕುರಿತೂ ಸಂಪೂರ್ಣ ವಿಚಾರಣೆ ನಡೆಸಲಾಗುವುದು' ಎಂದಿದೆ.
ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ದೇಶವ್ಯಾಪಿ 4,750 ಕೇಂದ್ರಗಳಲ್ಲಿ ಮೇ 5ರಂದು ಎನ್‌ಟಿಎ ನೀಟ್ ಪರೀಕ್ಷೆ ನಡೆಸಿತ್ತು. ಸುಮಾರು 24 ಲಕ್ಷ ವಿದ್ಯಾರ್ಥಿಗಳು ಇದನ್ನು ಎದುರಿಸಿದ್ದರು. ಇದೇ ವಿಷಯವಾಗಿ ಸಲ್ಲಿಕೆಯಾಗಿದ್ದ ಹಲವು ಅರ್ಜಿಗಳಿಗೆ ಎನ್‌ಟಿಎ ಹಾಗೂ ಕೇಂದ್ರದ ಪ್ರತಿಕ್ರಿಯೆ ಕೋರಿ ಕಳೆದ ವಾರ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿತ್ತು. ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಇನ್ನಿತರ ಅಕ್ರಮಗಳ ಕುರಿತು ಸಿಬಿಐ ತನಿಖೆ ನಡೆಸುವಂತೆಯೂ ಕೋರಿ ಅರ್ಜಿ ಸಲ್ಲಿಕೆಯಾಗಿದೆ.